ಮಂಡ್ಯ: ಕೊರೊನಾ ಭೀತಿಯಿಂದ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಪಡಿತರ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಶಾಲೆಗಳಿಗೂ ಆಹಾರ ಧಾನ್ಯಗಳನ್ನು ಸರ್ಕಾರ ವಿತರಿಸಿತ್ತು. ಆದರೆ, ಇಲ್ಲೊಂದು ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳಿಗೆ ಕೊಡಬೇಕಾದ ಪಡಿತರ ಸಂಪೂರ್ಣ ಹಾಳಾಗಿ ಹುಳು ಹತ್ತಿಕೊಂಡಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಪಡಿತರ ಧಾನ್ಯ ಹುಳದ ಪಾಲು ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಒಳಭಾಗದಲ್ಲಿವಿರುವ ಸರ್ಕಾರಿ ಪ್ರೌಢ ಶಾಲೆಯ ಆಡಳಿತ ಅಧಿಕಾರಿಗಳು ಹಾಗೂ ಶಿಕ್ಷಕರು ಸರಿಯಾಗಿ ಶಾಲೆಗೆ ಬರದೇ ನಿರ್ಲಕ್ಷ್ಯ ವಹಿಸಿದ್ದರಿಂದ ಮಕ್ಕಳಿಗೆ ನೀಡಬೇಕಿದ್ದ ಆಹಾರ ಧಾನ್ಯ ಗೋದಾಮಿನಲ್ಲಿ ಹುಳುಗಳ ಪಾಲಾಗಿದೆ.
ಶಾಲೆಯ ಉಗ್ರಾಣದಲ್ಲಿರಿಸಿದ್ದ 6.9 ಕ್ವಿಂಟಾಲ್ ಬೇಳೆ, 37 ಕ್ವಿಂಟಾಲ್ ಅಕ್ಕಿ, 17 ಚೀಲ ಉಪ್ಪು ಸೇರಿದಂತೆ ಹಲವು ಪದಾರ್ಥ ಸಂಪೂರ್ಣ ಹುಳುಗಳ ಪಾಲಾಗಿದೆ. ಜತೆಗೆ 7 ಚೀಲ ಹಾಲಿನ ಪೌಡರ್ ಕೂಡ ಹಾಳಾಗಿದೆ. ಇದಕ್ಕೆಲ್ಲ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ಬೆಳಕಿಗೆ ತಂದ ಮಾನವ ಹಕ್ಕುಗಳ ಸೇವಾ ಸಮಿತಿ ಜಿಲ್ಲಾಧ್ಯಕ್ಷೆ ಕೆ.ಹೆಚ್.ಇಂದಿರಾ ಆರೋಪಿಸಿದ್ದಾರೆ.
ಸದ್ಯ ಡಿಡಿಪಿಐ ಜವರೇಗೌಡ ಸೇರಿದಂತೆ ಅಕ್ಷರ ದಾಸೋಹದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಕ್ಕಳಿಗೆ ಕೊಡಬೇಕಿದ್ದ ಆಹಾರ ಪದಾರ್ಥ ಸ್ಟಾಕ್ ಉಳಿದಿತ್ತು. ಅಲ್ಲದೇ ಆಹಾರ ಧಾನ್ಯಗಳು ಸಂಪೂರ್ಣ ಹುಳಬಿದ್ದು ಹಾಳಾಗಿತ್ತು. ಇದರಲ್ಲಿ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ತಪ್ಪು ಕಂಡು ಬಂದಿದ್ದು, ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ಸಿಇಒ ಜತೆ ಮಾತನಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.