ಮಂಡ್ಯ:ಕಳೆದ ಬಾರಿ ಪೂರ್ಣ ಲಾಕ್‌ಡೌನ್ ಮಾಡಿದಾಗ ಹಲವು ಆರೋಪಗಳು ಬಂದಿದ್ದು, ಈ ಬಾರಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ ಎಂದು ಮಂಡ್ಯದಲ್ಲಿ ಸಚಿವ ನಾರಾಯಣಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುತ್ತಿರುವುದು ನಮ್ಮ ಕಣ್ಣಿಗೂ ಕಾಣಿಸುತ್ತಿದೆ. ಹೀಗಾಗಿ ಸಂಪೂರ್ಣ ಲಾಕ್‌ಡೌನ್ ಮಾಡೋದು ಒಳ್ಳೆಯದಾ? ಅಥವಾ ಇದೇ ರೀತಿ ಮುಂದುವರಿಸಬೇಕಾ? ಎಂಬುದರ ಬಗ್ಗೆ ಸಲಹೆ ಕೇಳ್ತಿದ್ದೀವಿ ಎಂದರು.
ಮಂಡ್ಯದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಇಂದು ಸಭೆ ನಡೆಯಲಿದ್ದು, ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಸರ್ಕಾರದ ಗಮನಕ್ಕೆ ತಂದು ತೀರ್ಮಾನ ಮಾಡಲಾಗುವುದು. ಜೆಡಿಎಸ್ ಶಾಸಕರು ಹೆಚ್ಚು ಇರೋದ್ರಿಂದ ಅವರ ಸಹಕಾರವೂ ಅಗತ್ಯ ಎಂದು ತಿಳಿಸಿದರು.
ಕೆಲವು ತೀರ್ಮಾನ ತೆಗೆದುಕೊಳ್ಳಲು ಉಸ್ತುವಾರಿ ಸಚಿವರಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಗೊಂದಲಕ್ಕೆ ಕಾರಣವಾಗಬಾರದೆಂದು ಶಾಸಕರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಆದಿಚುಂಚನಗಿರಿ ಮಠದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.