ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ಗೆ ಬಹಿರಂಗ ಬೆಂಬಲ ನೀಡಲು ನಾಗಮಂಗಲ ತಾಲೂಕಾ ಕಾಂಗ್ರೆಸ್ ನಾಯಕರುನಿರ್ಧಾರ ಮಾಡಿದ್ದಾರೆ. ಇಂದು ಸಭೆ ಮಾಡಿದ ನಾಯಕರು, ಕಾರ್ಯಕರ್ತರು ಸುಮಲತಾ ಬೆಂಬಲಕ್ಕೆ ನಿಲ್ಲಲು ನಿರ್ಧಾರ ಕೈಗೊಂಡರು.
ಪರೋಕ್ಷವಾಗಲ್ಲ ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ..- ನಾಗಮಂಗಲ ಬ್ಲಾಕ್ ಕಾಂಗ್ರೆಸ್ ರೆಬೆಲ್ - ಶಿವರಾಮೇಗೌಡ
ಸುಮಲತಾ ಗೆಲುವು ಶತ:ಸಿದ್ಧ. ಸುಮಲತಾರವರನ್ನು ವೈಯಕ್ತಿಕವಾಗಿ ಹೀಯಾಳಿಸುತ್ತಿರುವ ಶಿವರಾಮೇಗೌಡರ ನಡೆ ಅಕ್ಷಮ್ಯ ಅಪರಾಧ. ನಾವುಗಳು ಪರೋಕ್ಷವಾಗಿ ಅಲ್ಲ, ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ಮಾಡುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ.
ರೆಬೆಲ್ ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತು ತಂಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡುವಂತೆ ಸೂಚನೆ ನೀಡಿದ್ದರು. ಸೂಚನೆ ಬೆನ್ನಲ್ಲೇ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಾಗಮಂಗಲದ ಕಾಂಗ್ರೆಸ್ಸಿಗರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಬಹಿರಂಗವಾಗಿ ಪ್ರಚಾರ ಮಾಡುವ ಹೇಳಿಕೆ ನೀಡುವ ಮೂಲಕ ಈಗ ನೇರ ಬೆಂಬಲಕ್ಕೆ ಮುಂದಾಗಿದೆ. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಅಧ್ಯಕ್ಷರಾದ ಹೆಚ್.ಟಿ. ಕೃಷ್ಣೇಗೌಡ, ಎನ್.ಜೆ. ರಾಜೇಶ್ ಹಾಗೂ ಮುಖಂಡ ತುರುಬನಹಳ್ಳಿ ರಾಜೇಗೌಡರ ನೇತೃತ್ವದಲ್ಲಿ ಕರೆಯಲಾಗಿತ್ತು.
ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಎಲ್.ಆರ್. ಶಿವರಾಮೇಗೌಡರಿಗೆ ಹೈಕಮಾಂಡ್ ಸೂಚನೆಯಂತೆ ಸಹಕಾರ ನೀಡಿದ್ದರೂ ನಮ್ಮ ಕೈ ಕಾರ್ಯಕರ್ತರಿಗೆ ಯಾವುದೇ ಪ್ರಯೋಜನವಿಲ್ಲ. ದಿನದಿಂದ ದಿನಕ್ಕೆ ನಮ್ಮಗಳ ಮೇಲೆ ಕಿರುಕುಳದ ತೊಂದರೆಯೇ ಹೆಚ್ಚುತ್ತಿದೆ. ನಮ್ಮ ನಾಯಕತ್ವ ಉಳಿಯಬೇಕಾದರೆ ಕಾರ್ಯಕರ್ತರ ಮಾತನ್ನು ಕೇಳಬೇಕಾಗಿರುವುದು ಅನಿವಾರ್ಯ. ನಾವುಗಳು ಪರೋಕ್ಷವಾಗಿ ಅಲ್ಲ, ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ಮಾಡುತ್ತೇವೆ. ನಮ್ಮ ಅಸ್ತಿತ್ವ ಮತ್ತು ಸ್ವಾಭಿಮಾನದ ಉಳಿವಿಗಾಗಿ ಒಕ್ಕೊರಲವಾಗಿ ಬೆಂಬಲ ನೀಡುತ್ತೇವೆ. ಸುಮಲತಾ ಗೆಲುವು ಶತ:ಸಿದ್ಧ. ಸುಮಲತಾ ಅವರನ್ನು ವೈಯಕ್ತಿಕವಾಗಿ ಹೀಯಾಳಿಸುತ್ತಿರುವ ಶಿವರಾಮೇಗೌಡರ ನಡೆ ಅಕ್ಷಮ್ಯ ಅಪರಾಧ. ನಾಳೆ ನೆಡೆಯುವ ದರ್ಶನ್ ಕ್ಯಾಂಪೇನ್ನಲ್ಲಿ ಕಾಂಗ್ರೆಸ್ ಬಾವುಟ ಹಿಡಿದೇ ಪ್ರಚಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.