ಮಂಡ್ಯ: ಅನೇಕ ವೈಶಿಷ್ಟ್ಯತೆಗಳು ಹಾಗೂ ವೈವಿಧ್ಯತೆಗಳಿಗೆ ಸಾಕ್ಷಿಯಾಗಿರೋ ಜಿಲ್ಲೆ ಮಂಡ್ಯ. ಅತಿ ಹೆಚ್ಚು ಪ್ರವಾಸಿ ತಾಣಗಳೂ ಕೂಡ ಇಲ್ಲಿ ಕಾಣ ಸಿಗುತ್ತವೆ. ರಂಗನಾಥಸ್ವಾಮಿ ದೇವಾಲಯ, ಸೌಮ್ಯಕೇಶ್ವರ ದೇವಾಲಯ, ಬಸಾರಲು ದೇವಾಲಯ ಹಾಗೂ ಚಲುವರಾಯಸ್ವಾಮಿ ದೇವಸ್ಥಾನಗಳು ರಾಜ್ಯಾದ್ಯಂತ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿವೆ. ಅಷ್ಟೇ ಅಲ್ಲದೆ, ಪ್ರಸಿದ್ಧ ಚರ್ಚ್‌ಗಳು, ಮಸೀದಿ ಮಂಡ್ಯದಲ್ಲಿವೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಟಿಪ್ಪುವಿನ ಕೋಟೆ ಅಂತಲೇ ಕರೆಯುವ ಗುಂಬಜ್ ಕೋಟೆ ಅತ್ಯಂತ ಆಕರ್ಷಣೀಯ ತಾಣ. ಇಲ್ಲಿ ಮುಖ್ಯವಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಸಮಾಧಿಗಳಿವೆ. ಶ್ರೀರಂಗಪಟ್ಟಣ ಸಮೀಪದ ಕೆಆರ್‌ಎಸ್ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ ಪ್ರವಾಸಿಗರ ಆಕರ್ಷಣೆಗಳಲ್ಲೊಂದು. ಜಿಲ್ಲೆಯ ಮಳವಳ್ಳಿಯಲ್ಲಿ ಶಿವನ ಸಮುದ್ರ , ಭರಚುಕ್ಕಿ ಮತ್ತು ಗಗನಚುಕ್ಕಿ ಎಂಬ ಆಕರ್ಷಕ ಅವಳಿ ಜಲಪಾತವನ್ನು ಸೃಷ್ಟಿಸುತ್ತದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಅನೇಕ ವನ್ಯ ಮೃಗಗಳು ನೆಲೆಸಿರುವ ಸಂರಕ್ಷಿತವಾದ ರಾಷ್ಟ್ರೀಯ ಉದ್ಯಾನವನವೂ ಇದೆ. ಹೀಗೆ ಮಂಡ್ಯದ ಮಡಿಲಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ.
ಸುಮಲತಾ vs ನಿಖಿಲ್: ಸಕ್ಕರೆ ನಾಡ ಸಿಹಿ ಯಾರಿಗೆ?
ಸಕ್ಕರೆ ನಾಡು ಮಂಡ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಂಬಾ ಹೈಲೈಟ್ ಆಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕೃಷ್ಣರಾಜ ಸಾಗರ ಜಲಾಶಯವನ್ನು ನೆಚ್ಚಿಕೊಂಡಿರೋ ಇಲ್ಲಿನ ರೈತರು ಕಬ್ಬು, ಭತ್ತವನ್ನು ಹೆಚ್ಚಾಗಿ ಬೆಳೀತಾರೆ. ಈ ಕ್ಷೇತ್ರದ ಸಂಪೂರ್ಣ ಚಿತ್ರಣ ಇಲ್ಲಿದೆ.
ಮಂಡ್ಯದ ರೈತರ ಪ್ರಮುಖ ಬೆಳೆಗಳೆಂದರೆ ಕಬ್ಬು, ಭತ್ತ, ರಾಗಿ, ಜೋಳ ಹಾಗೂ ಇತರೆ ಬೆಳೆಗಳು. ಕೃಷ್ಣರಾಜ ಸಾಗರದ ನೀರನ್ನು ನಂಬಿಕೊಂಡಿರೋ ಇಲ್ಲಿನ ರೈತರು ಕಬ್ಬು, ಭತ್ತದ ಜೊತೆಗೆ ಹೈನುಗಾರಿಕೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ. ಇಲ್ಲಿನ ಜನರನ್ನು "ಸಕ್ಕರೆ ನಾಡಿನ ಅಕ್ಕರೆ ಜನತೆ" ಎಂದೇ ಬಣ್ಣಿಸಲಾಗುತ್ತದೆ. ಇನ್ನು ಕಾವೇರಿ ನದಿ ನೀರಿನ ವಿಚಾರದ ಬಂದಾಗ ಈ ಭಾಗದ ರೈತರು ಯಾವಾಗಲೂ ಮುಂಚೂಣಿಯಲ್ಲಿರ್ತಾರೆ. ಇನ್ನು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಅನ್ನದಾತರು ಕಂಗಾಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರೋದು ಕೂಡ ಇದೇ ಜಿಲ್ಲೆಯಲ್ಲಿ.
ಮಂಡ್ಯದ ರಾಜಕೀಯ ವಿಚಾರಕ್ಕೆ ಬರೋಣ. ಜಿಲ್ಲೆಯಲ್ಲಿ ಈ ಬಾರಿ ಸಿಎಂ ಪುತ್ರ ನಿಖಿಲ್ ಹಾಗೂ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸಿದ್ದಾರೆ. ಈ ವಿಚಾರಕ್ಕೆೋ ಏನೋ, ಈ ಬಾರಿ ದಾಖಲೆಯ ಮತದಾನವಾಗಿದೆ. ಒಟ್ಟು17,11,190 ಮತದಾರರಿದ್ದು, ಶೇ 80 ರಷ್ಟು ಮತದಾನವಾಗಿದೆ. ಇನ್ನು, ಚುನಾವಣೆ ಮೇಲೆ ಇಲ್ಲೂ ಜಾತಿ ಸಮೀಕರಣ ಪ್ರಭಾವ ಬೀರುತ್ತದೆ. ಒಕ್ಕಲಿಗರು ಹಾಗೂ ಹಿಂದುಳಿದ ವರ್ಗದ ಮತದಾರ ಸಂಖ್ಯೆ ಹೆಚ್ಚಿದ್ದು, ಯಾವುದೇ ಅಭ್ಯರ್ಥಿ ಗೆಲುವಿನಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ.