ಮಂಡ್ಯ: ಯುಪಿಎ ಸರ್ಕಾರದ ಪ್ರಧಾನಿ ಆಗಿದ್ದ ಡಾ. ಮನಮೋಹನ್ ಸಿಂಗ್‌ಗೆ ತಮ್ಮ ಕ್ಯಾಬಿನೆಟ್ ಮೇಲೆ ಹಿಡಿತ ಇರಲಿಲ್ಲ. ಎಲ್ಲವೂ ಎಕ್ಸ್‌ಸ್ಟ್ರಾ ಕಾನ್ಸ್‌ಸ್ಟ್ಯೂಟ್ ಬಾಡಿಯ ಅಂಗವಾಗಿದ್ದ ರಾಹುಲ್ ಗಾಂಧಿಯ ಕೈಯಲ್ಲಿತ್ತು ಎನ್ನುವ ಮೂಲಕ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಯುಪಿಎ ಸರ್ಕಾರದ ಆಡಳಿತ ವೈಖರಿಯನ್ನು ತೆರೆದಿಟ್ಟರು.
ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಏನೂ ಅಧಿಕಾರ ಇಲ್ಲದೇ ಇದ್ದ ರಾಹುಲ್ ಗಾಂಧಿ ಪರ್ಮಾನುಗಳನ್ನು ಹೊರಡಿಸುತ್ತಿದ್ದರು. ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಬೆಲೆಯೇ ಇಲ್ಲವಾಗಿತ್ತು ಎಂದರು.
ಕ್ಯಾಬಿನೆಟ್‌ನಲ್ಲಿ 80 ವರ್ಷ ತುಂಬಿದವರು ಇರಬಾರದು ಅಂತ ರಾಹುಲ್ ಗಾಂಧಿ ಪರ್ಮಾನು ಹೊರಡಿಸಿದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದೆ ಎಂದು ರಾಜೀನಾಮೆ ವಿಷ್ಯವನ್ನು ಬಿಚ್ಚಿಟ್ಟರು.
ಮನಮೋಹನ್ ಸಿಂಗ್‌ಗೆ ಗೊತ್ತಿಲ್ಲದಂತೆ ಹಲವು ವಿಚಾರಗಳು ನಡೆಯುತ್ತಿದ್ದವು. ಪ್ರಧಾನಿ ಜಾರಿಗೆ ತರಲು ನಿರ್ಧರಿಸಿದ್ದ ವಿಧೇಯಕವನ್ನ ರಾಹುಲ್ ಹರಿದು ಹಾಕಿದ್ರು. ಎಲ್ಲೋ ಕುಳಿತ್ತಿದ್ದ ರಾಹುಲ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.
ಭಾರತದ ನಿರ್ಣಾಯಕ ಘಟ್ಟ ಮುಟ್ಟುತ್ತಿದ್ದೇವೆ. 2014ರಲ್ಲಿ ದೇಶದಲ್ಲಿ ದೊಡ್ಡ ಕ್ರಾಂತಿ ನಡೀತು. ಆ ಕ್ರಾಂತಿಯೇ ಪ್ರಧಾನಿ ನರೇಂದ್ರ ಮೋದಿ. ಮೋದಿ 5 ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕರ್ತರು ಕೇವಲ ಸ್ಲೋಗನ್ ಕೂಗಿದರೆ ಸಾಲದು. ಮೋದಿ ಕೊಟ್ಟ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ ಚರ್ಚೆ ಆಗಬೇಕು.ಇದರಿಂದ ಜನರಿಗೆ ತಿಳುವಳಿಕೆ ಬರಲಿದೆ. 2004ರಿಂದ 14ರವರೆಗೆ ಕಾಂಗ್ರೆಸ್ ಸರ್ಕಾರ ಇತ್ತು. 2009-14ರವರೆಗೆ ರಾಜ್ಯಭಾರ ಮಾಡಿದ ಸರ್ಕಾರದಲ್ಲಿ ಅಧಿಕಾರದಲ್ಲಿದ್ದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆದರೆ ನಮ್ಮ ಜೊತೆಗಾರರು ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಆಗಲೇ ಹಗರಣಗಳು ಹೆಚ್ಚಾದವು ಎಂದು ಹೇಳಿದರು.
ಕಾಮನ್ವೆಲ್ತ್, 2ಜಿ, ಕಲ್ಲಿದ್ದಲು ಹಗರಣಗಳು ನಡೆದವು. ಮೋದಿ ಕೊಟ್ಟ ಶ್ರೇಷ್ಠ ಕೊಡುಗೆ ಎಂದ್ರೆ ಹಗರಣ ಮುಕ್ತ ಸರ್ಕಾರ. ಆ ಮೂಲಕ ಕ್ರಾಂತಿ ಮಾಡಿದರು. ಮೋದಿ ಬಂದ ಬಳಿಕ ಬದಲಾಗಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್ ಭಯೋತ್ಪಾದನೆಗೆ ತಿರುಗೇಟು ನೀಡಿದ್ದಾರೆ. ಮೋದಿ ಆಡಳಿತ ಮತ್ತೊಮ್ಮೆ ದೇಶಕ್ಕೆ ಬೇಕು. ಮಂಡ್ಯದಲ್ಲೂ ಈ ಸಲ ಖಾತೆ ತೆರೆಯಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಚಾರ ಮಾಡ್ತೀನಿ ಎಂದರು.