ಮಂಡ್ಯ :ಇಂದು ಜಿಪಂ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯೂ ಗದ್ದಲದ ಗೂಡಾಗಿತ್ತು. ಸಭೆಯಲ್ಲಿ ಸಂಸದೆ ಮತ್ತು ಶಾಸಕರ ನಡುವೆ ನಡೆದ ಕಾಳಗ ಸದ್ದು ಮಾಡಿತು.
ಸಭೆ ಆರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ, ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ನೆರದಿದ್ದ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ಸಂಸದೆ ಮತ್ತು ಜೆಡಿಎಸ್ ಶಾಸಕರ ಜತೆಗಿನ ಮಾತಿನ ಕಾಳಗ ಈ ವೇಳೆ KRS ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಇದೆಯಾ, ನಿಮ್ಮ ಲೆಟರ್ ಹೆಡ್ನಲ್ಲಿ ಬೇರೊಬ್ಬರು ಸಹಿ ಮಾಡಿದ್ದಾರೆ. ಇಂದಿನ 3 ಗಂಟೆ ಸಭೆ ಮಾಡುವ ಅಧಿಕಾರ ನಿಮಗಿಲ್ಲ, ನಿಮಗೆ ಅಧಿಕಾರ ಇದ್ದರೆ ಸಭೆ ನಡೆಸಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಸಂಸದೆ ಸುಮಲತಾ ವಿರುದ್ಧ ಗುಡುಗಿದರು.
ಇದಕ್ಕೆ KRS ದೇಶದ ಆಸ್ತಿ. ಹಾಗಾಗಿ, ಸಭೆ ಮಾಡಿದರೆ ತಪ್ಪೇನಿಲ್ಲ ಎಂದು ಸಂಸದೆ ಮರು ಉತ್ತರ ನೀಡಿದರು. ಆಗ ಕುರಿತಂತೆ ಲಿಖಿತ ಉತ್ತರ ಕೊಡುವಂತೆ ಶಾಸಕ ರವೀಂದ್ರ ಆಗ್ರಹಿಸಿದರು.
ಸಭೆ ನಡೆಸುವ ಹುನ್ನಾರ ಇಟ್ಟುಕೊಂಡಿದ್ದೀರಾ :
ಇದೇ ವೇಳೆ ಸಭೆ ನಡೆಯಬಾರದು ಎನ್ನುವ ಲೆಕ್ಕಾಚಾರ ಇಟ್ಟುಕೊಂಡು ಬಂದಿದ್ದೀರಾ ಎಂದು ದಳಪತಿಗಳಿಗೆ ಸಂಸದೆ ಸುಮಲತಾ ಟಾಂಗ್ ನೀಡಿದರು. ಸುಮಲತಾ ಹೇಳಿಕೆಗೆ ದಳಪತಿಗಳು ಆಕ್ಷೇಪ ವ್ಯಕ್ತಪಡಿಸಿ, ಈ ಮಾತು ವಾಪಸ್ ಪಡೆಯಿರಿ ಎಂದು ಜೆಡಿಎಸ್ ಶಾಸಕರು ಪಟ್ಟು ಹಿಡಿದರು. ಈ ವೇಳೆ ನನ್ನ ವಿರುದ್ಧ ಆರೋಪ ಇದ್ದರೆ ದೂರು ಕೊಡಿ ಎಂದು ಸಂಸದೆ ಗುಡುಗಿದರು.
ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಕೆಲಸ ಮಾಡ್ತಿದ್ದಾರೆ :ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಕೆಲಸ ಮಾಡ್ತಾರೆ. ಹೈವೇ ಅಂಡರ್ ಪಾಸ್ ಮಾಡಿಸಿ ಕೊಡ್ತಾರೆ. ನೀವೇನು ಕೆಲಸ ಮಾಡ್ತಿದ್ದೀರಾ? ಅಕ್ರಮದ ಹೆಸರಲ್ಲಿ ಸುತ್ತಲೂ ಅಕ್ರಮ ಮಾಡೋರನ್ನು ಇಟ್ಕೊಂಡಿದ್ದೀರಾ? ಎಂದರಲ್ಲದೆ ದೇವೇಗೌಡರ ಜೊತೆ ಶಾಸಕರು ಗಡ್ಕರಿ ಭೇಟಿ ಮಾಡ್ತಾರೆ. ನೀವು ಏನು ಮಾಡ್ತಿದ್ದೀರಿ ಅನ್ನೋದು ಗೊತ್ತಿಲ್ವಾ ಎಂದು ಸಂಸದೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಿಡಿಯಾದರು.
ಎಲ್ಲರೂ ಒಟ್ಟಿಗೆ ಬಂದು ಹಿಂಗೇ ಮಾಡಿದ್ರೆ ಹೆಂಗೆ?:ಈವರೆಗೂ ದಿಶಾ ಸಭೆಗೆ ಒಬ್ಬರೂ ಬಂದಿಲ್ಲ. ಇವತ್ತು ಎಲ್ಲರೂ ಒಟ್ಟಿಗೆ ಬಂದು ಹೀಗೆ ಸಭೆ ನಡೆಸಲು ಬಿಡದಿದ್ದರೆ ಹೇಗೆ ಎಂದು ದಳಪತಿಗಳಿಗೆ ಸಂಸದೆ ಸುಮಲತಾ ಪ್ರಶ್ನೆ ಮಾಡಿದರು. ಇದಕ್ಕೆ ದಿಶಾ ಸಭೆ ಮರೆತಿದ್ದಕ್ಕೆ ಕ್ಷಮಿಸಿ, ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಮರು ಉತ್ತರಿಸಿದರು.
ದಿಲ್ಲಿಯಲ್ಲಿ ಮಂಡ್ಯ ಮರ್ಯಾದೆ ಕಳೆದ್ರಿ :ದೆಹಲಿಯಲ್ಲಿ ಮಂಡ್ಯ ಮರ್ಯಾದೆ ಕಳೆದು ಅರ್ಜಿ ಕೊಟ್ಟಿದ್ದೆ ಕೊಟ್ಟಿದ್ದು ಎಂಬ ಶಾಸಕರ ಮಾತಿಗೆ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದಕ್ಕೆ ಇಷ್ಟೆಲ್ಲಾ ಪ್ರಶ್ನೆಗಳ, ಆ ಹೋರಾಟ ನಿಲ್ಲಿಸಿದ್ರೆ ನೀವು ಸುಮ್ಮನಾಗುತ್ತೀರಾ ಎಂದು ಸಂಸದೆ ಕಿಡಿಕಾರಿದರು.
ಮಾತಲ್ಲಿ ನೀವು ಪಿಹೆಚ್ಡಿ ಮಾಡಿದ್ದೀರಿ :ಶಾಸಕ ರವೀಂದ್ರ ಲೆಟರ್ ಹೆಡ್ ದುರ್ಬಳಕೆ ಬಗ್ಗೆ ಉತ್ತರ ಕೊಡಿ ಎಂದಿದ್ದಕ್ಕೆ ಸಂಸದೆ ದೂರು ಕೊಡಿ ಕ್ರಮವಹಿಸ್ತೀನಿ ಎಂದು ತಿರುಗೇಟು ನೀಡಿದರು. ಇದೇ ವೇಳೆ ಶಾಸಕ ರವೀಂದ್ರ ಇದ್ಯಾಕೋ ಗಂಡಾಗುಂಡಿ ಮಾತು ಎಂದು ಹೇಳಿದರು. ಗಂಡಾಗುಂಡಿ ಮಾತಲ್ಲಿ ನೀವು ಪಿಹೆಚ್ಡಿ ಮಾಡಿದ್ದೀರಿ, ಅದನ್ನು ನನಗೆ ಯಾಕೆ ಹೇಳ್ತೀರಿ, ಏನೇ ಆಗ್ಲೀ, ಜನಕ್ಕೆ ಒಳ್ಳೆಯ ಎಂಟರ್ಟೈನಮೆಂಟ್ ಕೊಡ್ತಿದ್ದೀರಾ ಎಂದು ಸಂಸದೆ ಸುಮಲತಾ ವ್ಯಂಗ್ಯವಾಡಿದರು.
ಮೊಬೈಲ್‌ನಲ್ಲಿ ಮುಳುಗಿದ ಅಧಿಕಾರಿಗಳು:
ಮೊಬೈಲ್‌ನಲ್ಲಿ ಮುಳುಗಿದ ಅಧಿಕಾರಿಗಳು ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ದಿಶಾ ಸಭೆಯ ವೇದಿಕೆಯಲ್ಲಿ ಸಂಸದರು ಶಾಸಕರು ಮಾತಿನ ಚಕಮಕಿ ನಡೆಸುತ್ತಿದ್ದರೆ, ಇತ್ತ ಅಧಿಕಾರಿಗಳು ಮೊಬೈಲ್‌ನಲ್ಲಿ ಮುಳುಗಿದ್ದರು. ಅಲ್ಲದೆ ಜಗಳ, ಮೊಬೈಲ್ ನೋಡಿಕೊಂಡು ಮನರಂಜನೆ ತೆಗೆದುಕೊಂಡರು.