ಮಂಡ್ಯ:ಮದ್ದೂರು ತಾಲೂಕು ನವಿಲೆ ಗ್ರಾಮದ ವಕೀಲ ಕೆ.ರವೀಂದ್ರ ಸಾವು ಪ್ರಕರಣ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಒಂದೆಡೆ ಅಕ್ರಮ ಮರಳು ದಂಧೆ ವಿರುದ್ಧ ಧ್ವನಿಯತ್ತಿದ್ದಕ್ಕೆ ಕೊಲೆಗೈಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದ್ರೆ, ಮತ್ತೊಂದೆಡೆ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧಿತ ವೈಷಮ್ಯದಿಂದ ಹತ್ಯೆ ಮಾಡಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಈ ನಡುವೆ ವಿವಾದಿತ ವ್ಯಾಜ್ಯಗಳಲ್ಲಿನ ಪ್ರಭಾವಿಗಳು ಕೊಲೆಗೈದಿದ್ದಾರೆ ಎಂದೂ ಹೇಳಲಾಗ್ತಿದೆ.
ಓದಿ : ಬಿಎಸ್ಪಿ ಮುಖಂಡ ರವೀಂದ್ರ ಅನುಮಾನಾಸ್ಪದ ಸಾವು ಪ್ರಕರಣ: 9 ಜನರ ವಿರುದ್ಧ ದೂರು ದಾಖಲು
ಪ್ರಕರಣವನ್ನು ಶೀಘ್ರ ಬೇಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಮಂಡ್ಯ ಜಿಲ್ಲಾದ್ಯಂತ ವಕೀಲರು ಕಲಾಪ ಬಹಿಷ್ಕರಿಸಿ ಹತ್ಯೆಯನ್ನು ಖಂಡಿಸಿದ್ದಾರೆ. ಮದ್ದೂರಿನಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ ನಡೆಸಿ, ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ. ಮದ್ದೂರಿನ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದ ಪ್ರತಿಭಟನಾಕಾರರು, ವಕೀಲ ರವೀಂದ್ರರನ್ನು ಹತ್ಯೆ ಮಾಡಿರುವವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ವಕೀಲ ರವೀಂದ್ರ ಸಾವು ಪ್ರಕರಣ ಬೇಧಿಸುವಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು ಓದಿ: ಬಿಎಸ್ಪಿ ಮುಖಂಡ ಎನ್ ಕೆ ರವೀಂದ್ರ ಅನುಮಾನಾಸ್ಪದ ಸಾವು
ಪೊಲೀಸ್ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಳವಳ್ಳಿ ಡಿವೈಎಸ್ಪಿ ಪೃಥ್ವಿ ನೇತೃತ್ವದಲ್ಲಿ ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ಎಸ್ಪಿ ಪರಶುರಾಮ್ ರಚಿಸಿದ್ದಾರೆ. ಸದ್ಯ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.