ಮಂಡ್ಯ: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪಾಲುದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮದ್ದೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಗೊತ್ತಿದ್ದರೂ ಜಿಲ್ಲಾಡಳಿತ ಸುಮ್ಮನೆ ಕುಳಿತಿದೆ. ಸರ್ಕಾರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇನ್ನು ಅಕ್ರಮ ಗಣಿಗಾರಿಕೆ ಬಗ್ಗೆ ಜಗತ್ತಿಗೆ ಗೊತ್ತಾಗಿದೆ. ಅದರಲ್ಲಿ ಯಾರ್ಯಾರು ಇದ್ದಾರೆ ಅನ್ನೋದನ್ನು ಸರ್ಕಾರ ಬಯಲು ಮಾಡಬೇಕು ಎಂದು ಒತ್ತಾಯಿಸಿದರು.
ಗಣಿಗಾರಿಕೆ ಅಕ್ರಮ-ಸಕ್ರಮದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ದುರ್ಘಟನೆಗಳು ಸಂಭವಿಸುತ್ತಿದ್ದವು. ಆದರೆ ಈಗ ಸಕ್ರಮ ಮಾಡಿಕೊಡ್ತೀವಿ, ನೀವು ಮುಂದುವರಿಸಿ ಎನ್ನುತ್ತಿದ್ದಾರೆ. ದುರ್ಘಟನೆಗಳು ಆಗಲಿ ಅಂತಾ ಸಕ್ರಮ ಮಾಡುತ್ತಿದ್ದೀರೋ ಎಂದು ಪ್ರಶ್ನಿಸಿದರು. ಮುಂದೆಯಾದರೂ ಈ ರೀತಿಯ ದುರ್ಘಟನೆ ನಡೆಯದಂತೆ ತಡೆಯಲು ಈ ರೀತಿ ಘೋಷಣೆ ಮಾಡಿದ್ದಾರೋ? ಸ್ಪಷ್ಟೀಕರಣ ಕೊಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.