ಮಂಡ್ಯ:ಬಿ.ವೈವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಅಲ್ಲದೇ ಸಿಎಂ ಅವರ ಪುತ್ರ. ಹಾಗಾಗಿ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಮತ್ತು ಸಿಎಂಗೆ ಸಹಾಯ ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಸಿಎಂ ಪುತ್ರ ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದ ವಿಚಾರವಾಗಿ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ ಸಚಿವ ನಾರಾಯಣಗೌಡ, ಅವರು ಮುಖ್ಯಮಂತ್ರಿ ಅವರ ಸುಪುತ್ರ. ನಮ್ಮ ಕರ್ನಾಟಕದಲ್ಲಿ 6 ಕೋಟಿ ಜನಸಂಖ್ಯೆ ಇದ್ದು, ಮುಖ್ಯಮಂತ್ರಿ ಪ್ರತಿಯೊಂದಕ್ಕೂ ಅಟೆಂಡ್ ಮಾಡಕಾಗುತ್ತಾ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಹಾಗಾಗಿ ಜವಾಬ್ದಾರಿಗಳು ಹೆಚ್ಚೇ ಇವೆ. ಅವರು ಸಿಎಂ ಜೊತೆಯಲ್ಲೇ ಇರ್ತಾರೆ, ಅಗತ್ಯ ಇದ್ದಲ್ಲಿ ಯಾರನ್ನಾದ್ರೂ ಭೇಟಿ ಮಾಡ್ತಾರೆ. ಇದನ್ನೆಲ್ಲಾ ದೊಡ್ಡ ವಿಷಯ ಮಾಡ್ತಾರೆ ಅಂದ್ರೆ ಬೇಸರ ಆಗುತ್ತೆ ಅಂತಾ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಸಮಯದಲ್ಲಿ ಇಡೀ ಕುಟುಂಬವೇ ಕ್ಯಾಬಿನೆಟ್ ನೆಡೆಸ್ತಿದ್ರು, ಆಗ್ಯಾಕೆ ದೊಡ್ಡ ವಿಷಯ ಮಾಡಲಿಲ್ಲ. ಮಕ್ಕಳು ನಮಗೆ ಸಹಕಾರ ನೀಡಲಿ ಎಂದು ಬಯಸುತ್ತೇವೆ. ಅದರಂತೆಯೇ ಸಿಎಂಗೆ ವಿಜಯೇಂದ್ರ ಸಹಕಾರ ನೀಡುತ್ತಿದ್ದಾರೆ. ಇಡೀ ರಾಜ್ಯದ ಜನರನ್ನು ಸಿಎಂ ಒಬ್ಬರೇ ಭೇಟಿ ಮಾಡಲು ಸಾಧ್ಯವೇ, ಎಲ್ಲವನ್ನು ಅವರೊಬ್ಬರೇ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೇ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆಂದು ವಿಜಯೇಂದ್ರ ಪರ ಸಚಿವ ನಾರಾಯಣ ಗೌಡ ಬ್ಯಾಟಿಂಗ್ ಮಾಡಿದರು.
ಕೆಲವು ಅಭಿವೃದ್ಧಿ ಕಾರ್ಯಗಳು ಆಗಬೇಕಾದ್ರೆ ವಿಜಯೇಂದ್ರ ಅವರ ಅಪ್ಪಣೆ ಬೇಕು ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಹೇಳಿದ್ದು? ಯಾರಿಗೆ ನೋವಿದೆ. ಸರ್ಕಾರವನ್ನು ಕಳೆದುಕೊಂಡವರಷ್ಟೇ ಮಾತನಾಡಬೇಕು. ನಾವ್ಯಾರು ಹಾಗೆ ಹೇಳಿಲ್ಲವಲ್ಲ ಎಂದರು. ವಿಜಯೇಂದ್ರ ಅವರು ಅಗತ್ಯ ಕೆಲಸ ಕಾರ್ಯಗಳನ್ನು, ಜನರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಿದ್ದಾರಷ್ಟೇ, ಅವರೇನು ಯಾವುದೇ ಕೆಲಸಗಳಿಗೆ ಸಹಿ ಹಾಕ್ತಿಲ್ಲ ಎಂದು ಹೇಳಿದರು.