ಮಂಡ್ಯ:ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಈ ಹಿಂದೆ ಅಂಬರೀಶ್ ಸ್ಥಳ ಮತ್ತು ಅನುದಾನವನ್ನು ಮಂಜೂರು ಮಾಡಿಸಿಕೊಟ್ಟಿದ್ದರು. ಈಗ ಅದನ್ನು ಉದ್ಘಾಟನೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ, ಇದು ಹೆಮ್ಮೆಯ ವಿಷಯ ಎಂದು ಸಂಸದೆ ಸುಮಲತಾ ಹೇಳಿದರು. ತುಂಬಕೆರೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ನಂತರ ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ, ಮಂಡ್ಯವನ್ನು ಅಭಿವೃದ್ದಿ ಪಥದಲ್ಲಿ ನಡೆಸುವುದರ ಬಗ್ಗೆ ಗಮನ ಕೇಂದ್ರೀಕರಿಸಿದ್ದೇನೆ. ಈ ವಿಚಾರಗಳ ಬಗ್ಗೆ ತಿಳಿದುಕೊಂಡ ಪರಿಣಿತರಿದ್ದಾರೆ ಅವರನೇ ಕೇಳಿ, ಈ ವಿಷಯ ಚುನಾವಣೆ ಇರುವುದರಿಂದ ವಿವಾದಾತ್ಮಕ ವಿಷಯವಾಗಿರುವುದ ಸಹಜ. ನಾನು ಅದರ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ನನ್ನ ಬಗ್ಗೆ ಮಾತನಾಡಿದರೆ ಮೈಲೇಜು ಹೆಚ್ಚಾಗಿ ಸಿಗುತ್ತದೆ - ಸುಮಲತಾ:ಡಾ. ರವೀಂದ್ರ ಅವರು ಸಂಸದರು ಸ್ವಾಭಿಮಾನಿ ಪದವನ್ನು ಬಳಸಬೇಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಏನು ಇಂಡಿಯಾದಲ್ಲಿ ಇಲ್ವಾ? ಪಾಕಿಸ್ತಾನದಲ್ಲಿ ಇದೆಯಾ? ಬಿಜೆಪಿ ಪಕ್ಷ ಪಾಕಿಸ್ತಾನದಲ್ಲಿ ಇದೆಯಾ? ಬಿಜೆಪಿ ಎಂಟು ವರ್ಷಗಳಿಂದ ದೇಶವನ್ನು ಆಳುತ್ತಿರುವ ಪಕ್ಷ, ಎರಡು ಪಕ್ಷಗಳು ರಾಷ್ಟೀಯ ಪಕ್ಷಗಳೇ. ಒಂದು ಪಕ್ಷಕ್ಕೆ ಹೋದರೆ ಹೇಗೆ ಸ್ವಾಭಿಮಾನ ಇಲ್ಲ, ಇನ್ನೊಂದು ಪಕ್ಷದಲ್ಲಿ ಇದ್ದರೆ ಮಾತ್ರ ಸ್ವಾಭಿಮಾನ ಇದೆ ಅಂದರೆ ಅದು ಲಾಜಿಕ್ ಇಲ್ಲದ ವಿಷಯ. ಅವರವರ ಅನುಕೂಲಕ್ಕೆ ಅವರು ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ ಬಿಡಿ ನನ್ನ ಬಗ್ಗೆ ಮಾತನಾಡಿದರೆ ಮೈಲೇಜು ಹೆಚ್ಚಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಲೇವಡಿ ಮಾಡಿದರು.