ಮಂಡ್ಯ:ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್ ಡ್ಯಾಂನಲ್ಲಿ ಯಾವುದೇ ರೀತಿಯ ಬಿರುಕು ಬಿಟ್ಟಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಇತ್ತೀಚಿಗೆ ಸಂಸದೆ ಸುಮಲತಾ ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಆರೋಪಿಸಿದ್ದರು.
ಕೆಆರ್‌ಎಸ್ ಡ್ಯಾಂನಲ್ಲಿ ಯಾವುದೇ ರೀತಿಯ ಬಿರುಕಿಲ್ಲ: ಸಚಿವ ನಾರಾಯಣ ಗೌಡ - Narayanagiwda
ಕೆಆರ್‌ಎಸ್ ಡ್ಯಾಂ ಕುರಿತು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಗೆ ಉಸ್ತುವಾರಿ ಸಚಿವ ನಾರಾಯಣ ಗೌಡ ಸ್ಪಷ್ಟನೆ ನೀಡಿದ್ದಾರೆ. ಡ್ಯಾಂನಲ್ಲಿ ಯಾವುದೇ ರೀತಿಯ ಬಿರುಕು ಬಿಟ್ಟಿಲ್ಲ, ಯಾವುದೇ ಆತಂಕ ಬೇಡ ಎಂದಿದ್ದಾರೆ.
ಈ ಸಂಬಂಧ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಈ ಸಂಬಂಧ ಸರ್ವೇ ಮಾಡಿಸಲಾಗಿದೆ. ಒಂದಲ್ಲ ಎರಡು ಏಜೆನ್ಸಿಯವರು ಸರ್ವೇ ಮಾಡಿ ವರದಿ ನೀಡಿದ್ದಾರೆ. ಡ್ಯಾಂನಲ್ಲಿ ಯಾವುದೇ ತರಹದ ಬಿರುಕಿಲ್ಲ, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾವಂತು ಕೆಆರ್‌ಎಸ್ ಸಮೀಪ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಇದ್ದೀವಿ. ಅದರಿಂದ ಡ್ಯಾಂಗೆ ಯಾವುದೇ ತೊಂದರೆಯಾಗಬಾರದು ಅಷ್ಟೇ. ನಾವು ಸೇರಿದಂತೆ ಲಕ್ಷಾಂತರ ಜನರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಸಾವಿರಾರು ರೈತರು ಇದರಿಂದ ಬೆಳೆ ಬೆಳೆಯುತ್ತಿದ್ದಾರೆ. ಇದನ್ನ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ನಿಮ್ಮಲ್ಲರದು. ಯಾವುದೇ ಆತಂಕ ಬೇಡ ಎಂದು ಧೈರ್ಯ ತುಂಬಿದ್ದಾರೆ.