ಮಂಡ್ಯ:ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಮಂಡ್ಯ ಯೂತ್ ಗ್ರೂಪ್ ಸಂಘಟನೆ ಮುಖಂಡರು ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೆಹರು ನಗರದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬುಧವಾರ ಜಾಥಾ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಕೆಲಕಾಲ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಸೋಲಾಗುತ್ತಿದೆ. ಇದಕ್ಕೆ ರಾಜಕೀಯ ಪಕ್ಷಗಳೇ ಕಾರಣ. ನದಿ ನೀರಿನ ವಿಚಾರದಲ್ಲಿ ಒಗ್ಗಟ್ಟಿನಿಂದ ಹೋರಾಟಕ್ಕಿಳಿಯದಿರುವುದು ನಮ್ಮ ಹಿನ್ನಡೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟ ಪರಿಸ್ಥಿತಿ ಎದುರಾದಾಗ ಸರ್ಕಾರಗಳು ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಕಡೆ ಬೊಟ್ಟು ಮಾಡುವ ಬದಲು ರೈತರ ಹಿತ ಕಾಪಾಡಲು ನಾವು ಹೇಗೆ ಕಾನೂನಾತ್ಮಕ ಹೆಜ್ಜೆ ಇಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕು. ಹವಾಮಾನ ಇಲಾಖೆ ವರದಿಯನ್ನು ಮುಂದಿಟ್ಟುಕೊಂಡು ತಮಿಳುನಾಡು ನೀರಿಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ಮಳೆ ಉತ್ತಮವಾಗಿ ಬಿದ್ದಲ್ಲಿ ಆ ನೀರನ್ನು ತಡೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಮಳೆಯೇ ಬೀಳದಿದ್ದಾಗ ನೀರು ಹರಿಸಿ ಎಂದು ಹೇಳುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಸಂಕಷ್ಟ ಕಾಲದಲ್ಲಿ ಎರಡೂ ರಾಜ್ಯಗಳ ನಡುವೆ ಉದ್ಭವಿಸಿರುವ ಜಲವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೂರಿಸಿ ಸಂಕಷ್ಟ ಸೂತ್ರ ರೂಪಿಸಲು ಆಸಕ್ತಿ ವಹಿಸಬೇಕು. ಕರ್ನಾಟಕ - ತಮಿಳುನಾಡು ರೈತರು ಜಗಳವಾಡುವುದಕ್ಕೆ ಅವಕಾಶ ನೀಡದೇ ಇಬ್ಬರೂ ನೀರನ್ನು ಸಮಾನವಾಗಿ ಹಂಚಿಕೆಯಾಗುವಂತೆ ಸೂತ್ರ ರೂಪಿಸಬೇಕು ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ಹೇಳಿದರು.