ಮಂಡ್ಯ :ನೂತನ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಿಗೆ ಕಳೆದ ಶನಿವಾರ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಕೆ.ಸಿ. ನಾರಾಯಣ ಗೌಡ ಅವರಿಗೆ ಈ ಮೊದಲು ಇದ್ದ ಯುವ ಸಬಲೀಕರಣ ಮತ್ತು ಕ್ರೀಡೆ ಜೊತೆಗೆ ರೇಷ್ಮೆ ಇಲಾಖೆಯ ಜವಬ್ದಾರಿಯನ್ನು ನೀಡಲಾಗಿದೆ.
ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ನಾರಾಯಣ ಗೌಡ ಅವರಿಗೆ ಪ್ರಾರಂಭದಲ್ಲಿ ರೇಷ್ಮೆ ಖಾತೆ ನೀಡಲಾಗಿತ್ತು. ನಂತರ ಖಾತೆ ಬದಲಿಸಿ ಯುವ ಸಬಲೀಕರಣ ಮತ್ತು ಕ್ರೀಡೆಯನ್ನು ವಹಿಸಲಾಗಿತ್ತು. ಈ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದ ನಾರಾಯಣ ಗೌಡರಿಗೆ ಈ ಬಾರಿಯೂ ಅದೇ ಖಾತೆ ಸಿಕ್ಕಿರುವುದರಿಂದ ಜನ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿದ್ದಾರೆ.
ಗಮನ ಸೆಳೆದಿದ್ದ ಕೆಸಿಎನ್ :ರೇಷ್ಮೆ ಖಾತೆ ವಹಿಸಿಕೊಂಡಿದ್ದಾಗ ಅಷ್ಟೇನೂ ಕಾಲಾವಕಾಶ ಸಿಗದ ಕಾರಣ ಗಮನಾರ್ಹ ಯೋಜನೆ ಜಾರಿಯಾಗಿರಲಿಲ್ಲ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡೆ ಖಾತೆ ವಹಿಸಿಕೊಂಡಾಗ ವಿಶೇಷ ಯೋಜನೆಗಳ ಮೂಲಕ ಸಚಿವ ನಾರಾಯಣ ಗೌಡ ಗಮನ ಸೆಳೆದಿದ್ದರು.
ಪ್ರಮುಖವಾಗಿ ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ಗರಡಿ ಮನೆ ಅಭಿವೃದ್ಧಿಗೆ 10 ಲಕ್ಷ ರೂ., ಮಂಡ್ಯ ನಗರದ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ 10 ಕೋಟಿ ರೂ., ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಹಾಗೂ ಕೆ.ಆರ್. ಪೇಟೆ ತಾಲೂಕು ಕ್ರೀಡಾಂಗಣದ ಹೊರಾಂಗಣದಲ್ಲಿ ಸುಸಜ್ಜಿತವಾದ ಜಿಮ್ ನಿರ್ಮಾಣಕ್ಕೆ 43.97 ಲಕ್ಷ ರೂ. ಅನುದಾನವನ್ನು ನಾರಾಯಣ ಗೌಡ ಒದಗಿಸಿದ್ದರು.
ಓದಿ : ಆನಂದ್ ಸಿಂಗ್ರನ್ನು ಕರೆಸಿ ಮಾತನಾಡಿದ್ದೇನೆ, ಅವರು ಸಮಾಧಾನವಾಗಿದ್ದಾರೆ: ಸಿಎಂ ಬೊಮ್ಮಾಯಿ
ಇದರ ಜೊತೆಗೆ ಕೆ.ಆರ್. ಪೇಟೆ ತಾಲೂಕಿನ ಹೊಸಹೊಳಲುವಿನಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಗೆ 1.5 ಕೋಟಿ ರೂ., ಮಂಡ್ಯ ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ, ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ., ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ 2 ಕೋಟಿ ರೂ. ಹಾಗೂ ಕೆ. ಆರ್. ಪೇಟೆ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 7 ಕೋಟಿ ರೂ. ಅನುದಾನ ನೀಡಿದ್ದರು.
ಇದೀಗ ಮತ್ತೆ ಅದೇ ಖಾತೆ ಸಿಕ್ಕಿರುವುದರಿಂದ ಇತರ ತಾಲೂಕುಗಳಲ್ಲಿಯೂ ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ಸಿಗುವ ಭರವಸೆ ಜಿಲ್ಲೆಯ ಜನರದ್ದಾಗಿದೆ.