ಮಂಡ್ಯ:ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ವಷ್ಟ ಭರವಸೆ ನೀಡದಿರುವ ಹಿನ್ನೆಲೆ ಹೋರಾಟ ಮುಂದುವರಿಕೆ ಬಗ್ಗೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಭೆ ನಡೆಯಿತು. ಈ ವೇಳೆ, ಸಭೆಯಲ್ಲಿ ಚರ್ಚೆ ವೇಳೆ ಮಾಜಿ ಸಚಿವ ಹಾಗೂ ರೈತ ಸಂಘದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ನಗರದ ಸರ್ ಎಂ ವಿ ಪ್ರತಿಮೆ ಎದುರಿನ ಧರಣಿ ಸ್ಥಳದಲ್ಲಿ ಮಾಜಿ ಸಚಿವ ಎಂ.ಎಸ್ ಆತ್ಮಾನಂದ ಹಾಗೂ ರೈತ ಸಂಘದ ಇಂಡುವಾಳು ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗದ್ದಲ ಉಂಟಾಯಿತು. ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸ್ಪಷ್ಟ ನಿಲುವು ಕೈಗೊಳ್ಳದ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮೈಶುಗರ್ ಕಾರ್ಖಾನೆ ವಿಷಯ ಪ್ರಸ್ತಾಪಗೊಂಡಾಗ ಪರಸ್ಪರ ಕೈ ತೋರಿಸುತ್ತ ಇಬ್ಬರು ಕುರ್ಚಿಯ ಮೇಲೆದ್ದು ಏರು ದನಿಯಲ್ಲಿ ವಾಗ್ವಾದಕ್ಕೆ ಇಳಿದ ಹಿನ್ನೆಲೆಯಲ್ಲಿ ಗದ್ದಲದ ಪರಿಸ್ಥಿತಿ ಏರ್ಪಟ್ಟು ಗೊಂದಲ ಉಂಟಾಯಿತು, ಸಭೆಯಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಲು ಮುಂದಾದರೂ ಸಹ ಮಾತಿನ ಚಕಮಕಿ ಕೆಲಕಾಲ ಮುಂದುವರೆಯಿತು. ಅನಂತರ ಇಬ್ಬರನ್ನು ರೈತ ಮುಖಂಡರು ಸಮಾಧಾನಪಡಿಸಿದರು.
ಕಾವೇರಿ ಹೋರಾಟ ಮುಂದುವರಿಸಲು ತೀರ್ಮಾನ:ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ನಿರಂತರ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಕಾವೇರಿ ಹೋರಾಟ ಮುಂದುವರಿಸಲು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ತೀರ್ಮಾನಿಸಿದೆ.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಹಮ್ಮಿಕೊಂಡಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸುನಂದ ಜಯರಾಂ ಮಾತನಾಡಿ,ತಮಿಳುನಾಡಿಗೆ ಪ್ರತಿನಿತ್ಯ 2600 ಕ್ಯೂಸೆಕ್ ನಂತೆ 15 ದಿನಗಳ ಕಾಲ ನೀರು ಬಿಡುವಂತೆ ಸಮಿತಿ ಶಿಫಾರಸು ಮಾಡಿರುವುದು ಮತ್ತು ಮುಖ್ಯಮಂತ್ರಿ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ನಿಲ್ಲಿಸುವ ಬಗ್ಗೆ ದಿಟ್ಟ ನಿಲುವು ತಾಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದರು.
ಹೋರಾಟ ಮುಂದುವರಿಸುವ ಬಗ್ಗೆ ಯಾವುದೇ ಗೊಂದಲ ಇಲ್ಲ, ವ್ಯತ್ಯಾಸವು ಇಲ್ಲ, ನಿರಂತರ ಧರಣಿ ಮುಂದುವರೆಯಲಿದೆ, ಸರ್ಕಾರ ಯಾವ ರೀತಿ ಮುಂದುವರೆಯಲಿದೆ ಎಂಬುದು ಅವರಿಗೆ ಬಿಟ್ಟ ವಿಚಾರ ಕಾನೂನಾತ್ಮಕ ಹೋರಾಟವನ್ನು ಮಾಡಲಿ, ವಿಶೇಷ ಜಂಟಿ ಅಧಿವೇಶನ ಕರೆದು ಚರ್ಚೆ ಮಾಡಲಿ, ಸಂಸದರನ್ನು ಒಳಗೊಂಡಂತೆ ಮಮತದ ತೀರ್ಮಾನ ಕೈಗೊಳ್ಳಲಿ, ಒಳ್ಳೆಯದನ್ನು ನಿರೀಕ್ಷೆ ಮಾಡುತ್ತೇವೆ. ಆದರೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.