ಮಂಡ್ಯ: ಜೆಡಿಎಸ್ಗೆ ಈಗ ಸಾಲ ಮನ್ನಾ ವಿಚಾರವೇ ಚುನಾವಣಾ ಅಸ್ತ್ರವಾಗಿದೆ. ಸಿಎಂ ಬಿಎಸ್ವೈ ತವರು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಸಮಾವೇಶ ನಡೆಸಿ, ಕೆ.ಆರ್.ಪೇಟೆಯಲ್ಲಿ ಆಗಿರುವ ಸಾಲ ಮನ್ನಾದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಜೆಡಿಎಸ್ಗೆ ಸಾಲ ಮನ್ನಾವೇ ಚುನಾವಣಾ ಅಸ್ತ್ರ ಕೆ.ಆರ್.ಪೇಟೆಯ ಬೂಕನಕೆರೆ ಸಿಎಂ ಯಡಿಯೂರಪ್ಪನವರ ತವರು ಗ್ರಾಮ. ಇಲ್ಲಿಂದಲೇ ಜೆಡಿಎಸ್ ಪ್ರಚಾರ ಸಭೆ ಆರಂಭ ಮಾಡಿದ್ದು, ಕುಮಾರಸ್ವಾಮಿ ಆಡಳಿತದ ಅವಧಿಯಲ್ಲಿ ಆದ ಸಾಲ ಮನ್ನಾ ಇಷ್ಟು ಎಂದು ಮಾಹಿತಿ ಹೊತ್ತ ಕಿರುಹೊತ್ತಿಗೆಯನ್ನು ಜನರಿಗೆ ಹಂಚಿಕೆ ಮಾಡುವುದಾಗಿ ಈ ಹಿಂದೆ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದರು. ಹೀಗಾಗಿ ಇಂದಿನ ಈ ಸಭೆ ಕುತೂಹಲಕ್ಕೆ ಕಾರಣವಾಗಿತ್ತು.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ 22 ಸಾವಿರ ರೈತರ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಸಾಲ ಮನ್ನಾ ಆಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ನೀಡಬೇಕು. ಪಕ್ಷಾಂತರ ಮಾಡಿದ ಕೆ.ಸಿ.ನಾರಾಯಣಗೌಡರಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗಷ್ಟೇ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೂಕನಕೆರೆಯಿಂದಲೇ ಸಾಲ ಮನ್ನಾದ ಮಾಹಿತಿ ಪುಸ್ತಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಹೇಳಿಕೆಯಿಂದ ಹಿಂದೆ ಸರಿದು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ಈಗ ಜೆಡಿಎಸ್ ಮುಖಂಡರು ಸಭೆ ಮಾಡಿ ಸಾಲ ಮನ್ನಾದ ಬಗ್ಗೆ ಮಾಹಿತಿ ನೀಡಿದ್ದಾರೆ.