ಮಂಡ್ಯ: ಕೊರಾದಿಂದ ರಾಜ್ಯದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಈ ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬೇಡ. ನನಗೆ ಸಿಎಂ ಆಗೋಕೆ ಅತುರ ಇಲ್ಲಾ. ಜನರ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಜಿಲ್ಲೆಯ ಮಳವಳ್ಳಿ ತಾಲೂಕಿನ ಸತ್ತೆಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಸಂಕಷ್ಟದಲ್ಲಿದ್ದಾರೆ, 30 ಸಾವಿರಕ್ಕೂ ಹೆಚ್ಚು ಜನ ಕೋವಿಡ್ಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಬೆರೆಸಬಾರದು. ನಾನು ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಿ ಅಂತ ಸಲಹೆ ಕೊಟ್ಟಿದ್ದೆ. ಎಷ್ಟು ಸರಿಯಾಗಿ ಪಾಲಿಸದ್ರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ಹೆಸರಲ್ಲಿ ರಾಜಕಾರಣ ಮಾಡಲ್ಲ:ನನಗೆ ಜಾತಿ ಇಲ್ಲಾ, ನಾಡಿನ ಜನತೆ ನನ್ನನ್ನು ಜಾತಿಯಿಂದ ಗುರ್ತಿಸಿಲ್ಲಾ. ಜಾತಿ ಹೆಸರಲ್ಲಿ ಮತ ತಗೊಳ್ಳಕ್ಕೆ ಹೋಗಲ್ಲ, ನನಗೂ ಬೇರೆ ರಾಜಕಾರಣಿಗಳಿಗೂ ವ್ಯತ್ಯಾಸ ಇದೆ. ಆರೂವರೆ ಕೋಟಿ ಜನರು ನನ್ನ ಅಣ್ಣ-ತಮ್ಮಂದಿರು. ಜಾತಿ ಹೆಸರಿನಿಂದ ಪಕ್ಷ ಕಟ್ಟೋಕ್ಕೆ ಹೋಗಲ್ಲ ಎಂದರು.
ಐದು ಕಾರ್ಯಕ್ರಮದ ಬಗ್ಗೆ ಚರ್ಚೆ:ನಾಡಿನ ಜನ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಐದು ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡ್ತಿದ್ದೇನೆ. ಕಾರ್ಯಕ್ರಮಗಳನ್ನ ತರಲು ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ಬೆಂಬಲಿಸಿ ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯವನ್ನ ಸರಿಪಡಿಸುವುದರ ಬಗ್ಗೆ ಸವಾಲು ಸ್ವೀಕರಿಸುತ್ತೇನೆ. ಇದನ್ನು ಜನರ ತೀರ್ಮಾನಕ್ಕೆ ಬಿಡ್ತೇನೆ ಎಂದು ಹೇಳಿದರು.
ಬಿಎಸ್‌ವೈ ರಾಜೀನಾಮೆ:ನನಗೆ ಸಂಬಂಧಿಸಿದ ವಿಷಯ ಅಲ್ಲ, ಅದು ಬಿಜೆಪಿ ಆಂತರಿಕ ವಿಚಾರ. ಅವರ ಪಕ್ಷದ ನಿರ್ಧಾರದಲ್ಲಿ ನಾನು ಮೂಗು ತೂರಿಸುವುದು ಶೋಭೆತರುವುದಿಲ್ಲ ಎಂದು ಬಿಎಸ್‌ವೈ ರಾಜಿನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಮಠಾಧೀಶರ ಬೆಂಬಲ ವಿಚಾರಕ್ಕೆ ಮಹತ್ವ ಕೊಡಲ್ಲ: ಬಿಎಸ್‌ವೈಗೆ ಮಠಾಧೀಶರ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರಕ್ಕೆ ನಾನು ಮಹತ್ವ ಕೊಡುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಭಾವನೆ ಇದೆ, ಅವರ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅದರ ಸರಿ ತಪ್ಪು ನಿರ್ಧಾರ ಜನರದ್ದು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ 2ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿಸಿದರು.