ಮಂಡ್ಯ:ಕೊರೊನಾ ಸೋಂಕಿತರ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಿರುವ ಹೆಚ್ಚಿನ ಸಾಮರ್ಥ್ಯವುಳ್ಳ ಆಮ್ಲಜನಕ ಜನರೇಟರ್ ಘಟಕವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ದೆಹಲಿಯಿಂದ ಆನ್‌ಲೈನ್ ಮೂಲಕ ಉದ್ಘಾಟಿಸಿದ್ದಾರೆ.
ಆಕ್ಸಿಜನ್ ಘಟಕ ಲೋಕಾರ್ಪಣೆ ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಆಸ್ಪತ್ರೆಯ ಪ್ರಾಂಶುಪಾಲರೂ ಮತ್ತು ಅಧಿಕಾರಿಗಳು ಘಟಕಕ್ಕೆ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು.
700 ಲೀ ಸಾಮರ್ಥ್ಯ:
ಈ ಘಟಕ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂದಾಜು ಶೇ.93 ರಷ್ಟು ಸಾಂದ್ರತೆಯಳ್ಳ ಆಮ್ಲಜನಕ ಆಸ್ಪತ್ರೆಯ ರೋಗಿಗಳಿಗೆ ಇನ್ಮುಂದೆ ನಿರಂತರವಾಗಿ ಲಭ್ಯವಾಗಲಿದೆ. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಕಾರ್ಯಕರ್ತರು ಮತ್ತು ಆಸ್ಪತ್ರೆಯ ಸೇವೆಗಳನ್ನು ಬಳಸುತ್ತಿರುವ ಸುತ್ತಮುತ್ತಲಿನ ಎಲ್ಲ ವರ್ಗದ ಜನರಿಗೂ ಅನುಕೂಲವಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.