ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ ಮಾಜಿ ಸಚಿವ ಸಿ ಟಿ ರವಿ ಮಂಡ್ಯ: ತಾಯಿ ಮಗು ಅತ್ತಾಗ ಹಾಲು ಕೊಡುತ್ತಾಳೆ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ತಮಿಳುನಾಡಿನವರು ಕೇಳುವ ಮುನ್ನವೇ ಕಾವೇರಿ ನೀರು ಹರಿಸಿದೆ. ಇಷ್ಟು ನೀರು ಹರಿಸುವ ಮೊದಲೇ, ಆರಂಭದಲ್ಲೇ ವಾಸ್ತವಿಕ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕಿತ್ತು. ರಾಜ್ಯ ಸರ್ಕಾರ ನೀರು ಬಿಡಲ್ಲ ಎನ್ನುವ ನಿಲುವು ತಾಳಲಿ. ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಮಂಡ್ಯದಲ್ಲಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು. ಆಡಳಿತ ಪಕ್ಷಗಳು ಬದಲಾಗಿವೆ. ಆದರೆ ರೈತ ಹಿತರಕ್ಷಣಾ ಸಮಿತಿ ನಿಲುವುಗಳು ಎಂದಿಗೂ ಬದಲಾಗಿಲ್ಲ. ಕಾವೇರಿ ಉಪನದಿ ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಜೊತೆಗೆ ನನ್ನ ಸಾರ್ವಜನಿಕ ಜೀವನ ಪ್ರಾರಂಭವಾಗಿದ್ದು ರೈತ ಚಳವಳಿ ಮೂಲಕ. ನನಗೂ ರೈತ ಕುಟುಂಬದ ಹಿನ್ನೆಲೆ ಇದೆ. ರೈತರ ನೋವು ನಲಿವು ನನಗೆ ಗೊತ್ತಿದೆ. ಇವತ್ತು ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೆ, ಬದುಕಿದ್ದು ಸತ್ತಂತೆ. ಆ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ಸಿಗರು ಭಾರತ್ ಜೋಡೋ ಪಾದಯಾತ್ರೆ ಮಾಡಿದಾಗ ಜನರಿಗೆ ಅವರ ಮೇಲೆ ವಿಶ್ವಾಸ ಹೆಚ್ಚಿತ್ತು. ಹಾಗಾಗಿ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಗೆಲ್ಲಿಸಿದ್ರು. ಆದರೆ ಕಾಂಗ್ರೆಸ್ನವರು ಅಧಿಕಾರ ಹಿಡಿದ ಬಳಿಕ ರೈತರ ಹಿತ ಮರೆತಿದ್ದಾರೆ. ತಮಿಳುನಾಡಿನವರು ಕೇಳುವ ಮೊದಲೇ ಇವರು ನಮ್ಮ ರಾಜ್ಯದ ರೈತರ ಬಗ್ಗೆ ಚಿಂತಿಸದೆ, ಕಾಂಗ್ರೆಸ್ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ವಾಡಿಕೆಗಿಂದ ಮಳೆ ಕಡಿಮೆ ಆಗಿದೆ. ಹಾಗಾಗಿ ಡ್ಯಾಂನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿ 5000 ಕೂಸೆಕ್ ನೀರು ಹರಿಸಬೇಕು ಎನ್ನುವ ಆದೇಶವನ್ನು ಪಾಲಿಸಿದರೆ, ಕೊನೆಗೆ ನಮ್ಮ ಕೆಆರ್ಎಸ್ ಡ್ಯಾಂನಲ್ಲಿ ಕೇವಲ 6TMC ನೀರು ಮಾತ್ರ ಉಳಿಯುತ್ತದೆ. ಕಾವೇರಿ ನೀರಿಗಾಗಿ ಮಂಡ್ಯದವರು ಮಾತ್ರ ಅಲ್ಲ ಬೆಂಗಳೂರಿನವರು ಕೂಡ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಬಿನಿ, ಕೆಆರ್ಎಸ್ ಅಣೆಕಟ್ಟುಗಳನ್ನು ಕಟ್ಟಿದ್ದು, ತಮಿಳುನಾಡಿಗೆ ಬೇಕಾದಾಗ ನೀರು ಬಿಡೋದಕ್ಕಾ? ಹೀಗೆ ನೀರು ಬಿಟ್ಟು, ಖಾಲಿಯಾದ ಮೇಲೆ ಮುಂದಿನ ದಿನಗಳಲ್ಲಿ ಕುಡಿಯಲು ನೀರು ಎಲ್ಲಿಂದ ತರುತ್ತೀರಿ? ಮಳೆ ಆದಾಗ ನೀರು ಯಾಕೆ ಬಿಟ್ರಿ ಎಂದು ನಾವ್ಯಾರು ಕೇಳಿಲ್ಲ. ಆದರೆ ಸಂಕಷ್ಟ ಇದ್ದ ಕಾಲದಲ್ಲಿ ನೀರು ಬಿಡಬಾರದು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿ? ಎಲ್ಲಿ ಹೋಯ್ತು ಹಕ್ಕು? ರಾಜ್ಯದ ಹಿತ ಮುಖ್ಯವಾ, ಇಲ್ಲಾ ನಿಮಗೆ ರಾಜಕೀಯ ಸಂಬಂಧ ಮುಖ್ಯವಾ? ಎಂದ ಸಿ ಟಿ ರವಿ ಪ್ರಶ್ನಿಸಿದರು.
ಬೆಂಗಳೂರು ಜನರು ನಿಮ್ಮ ವಿರುದ್ಧ ಮತ ಹಾಕಿದ್ರು ಅಂತ ಅವರಿಗೆ ಕುಡಿಯುವ ನೀರು ಕೊಡಬಾರದು ಅಂತ ಹೀಗೆ ಮಾಡ್ತಿದ್ದೀರಾ? ನನಗೆ ಈ ಅನುಮಾನ ಮೂಡುತ್ತಿದೆ. ಅಧಿಕಾರದಲ್ಲಿದ್ದಾಗ ಗೂಂಡಾ ರೀತಿ ದುರಹಂಕಾರದಿಂದ ವರ್ತಿಸಬೇಡಿ. ನಿಮ್ಮ ದುರಹಂಕಾರಕ್ಕೆ ಈ ಜನ ಮದ್ದು ಅರೆಯುತ್ತಾರೆ. ಏನು ಬೇಕಾದರೂ ಆಗಲಿ ರಾಜ್ಯದ ಹಿತ ಮುಖ್ಯ ಎಂದಿದ್ದರೆ ಅದು ಸದ್ಗುಣ. ನೀರು ಉಳಿಸಿಕೊಳ್ಳುವ ಕೆಲಸ ನಿಮ್ಮಿಂದ ಆಗಿಲ್ಲ. ಹಂಚಿ ತಿನ್ನೋದು, ಕೂಡಿ ಬಾಳೋದು ಈ ನೆಲದ ಗುಣ. ಈಗ ನಾವೇ ಒಣಗಿ ಹೋಗುವಾಗ ಕುಡಿಯುವ ನೀರು ಕೇಳಿದ್ರೆ ದುರಹಂಕಾರದ ಮಾತು ಆಡ್ತೀರಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳು ರಾಜಕೀಯ ಆಯಾಮ ಕಲ್ಪಿಸುತ್ತಿವೆ: ಡಿ ಕೆ ಶಿವಕುಮಾರ್