ಮಂಡ್ಯ: ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆಯಿಂದ ನಗರದ ರಸ್ತೆಗಳು ಹಾಳಾಗಿದ್ದು, ಜಲಮಂಡಳಿಯೊಂದಿಗೆ ಚರ್ಚಿಸಿ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಹೇಳಿದ್ದಾರೆ.
ಮಂಡ್ಯದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ನಗರಸಭೆ ಅಧ್ಯಕ್ಷ ಮಂಜು - Mandya Municipal Council Chairman HS Manju
ಮಂಡ್ಯ ನಗರದಲ್ಲಿನ ಉದ್ಯಾನಗಳನ್ನು ಒಮ್ಮೆ ನಿರ್ವಹಣೆ ಮಾಡಿ ನಂತರ ಆಸಕ್ತ ಖಾಸಗಿಯವರಿಗೆ ವಹಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಹೇಳಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಮಾತನಾಡಿದ ಅವರು, ನಗರದಲ್ಲಿ 6.97 ಕೋಟಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಇನ್ನೆರಡು ತಿಂಗಳಲ್ಲಿ ನೂತನ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗುವುದು. ಈಗಿನ ಮಾರುಕಟ್ಟೆಯನ್ನು ಹಳೆ ತಾಲೂಕು ಕಚೇರಿಗೆ ಸ್ಥಳಾಂತರಿಸಿ ಶೆಡ್ ನಿರ್ಮಿಸಿಕೊಡಲಾಗುವುದು. ಈ ಹಿಂದೆ 4.97 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಿಟ್ಟುಹೋದ ಕಾಮಗಾರಿಗಳನ್ನು ಒಳಗೊಂಡಂತೆ ಇನ್ನು 15 ದಿನದಲ್ಲಿ 6.97 ಕೋಟಿ ಅಂದಾಜು ಪಟ್ಟಿ ತಯಾರಿಸಿ 30 ದಿನದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುವುದು.
ನೀರಿನ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದರೂ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದು. ನೀರಿನ ದರ ಸಾರ್ವಜನಿಕರಿಗೆ ಹೊರೆಯಾಗದಂತೆ ಕಡಿಮೆ ಮಾಡಲು ಮೊದಲ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2017ರಿಂದ ವಿದ್ಯುತ್ ದರ ಸೇರಿ 282 ರೂ. ನಿಗದಿಪಡಿಸಲಾಗಿತ್ತು. ಅದನ್ನು ಪರಿಷ್ಕರಣೆ ಮಾಡಿ ವಿದ್ಯುತ್ ದರ ಹೊರತುಪಡಿಸಿ 160 ರೂ. ನಿಗದಿ ಮಾಡಲಾಗಿದೆ. ಈಗಾಗಲೇ 282 ರೂ. ಪಾವತಿ ಮಾಡಿರುವವರು ಮುಂದಿನ ಬಿಲ್ ಬಂದಾಗ 120 ರೂ. ಕಡಿತಗೊಳ್ಳಲಿದೆ ಎಂದು ಮಾಹಿತಿ ನೀಡಿದರು.