ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಉಸಿರಾಡುತ್ತಿದೆ, ಅದನ್ನು ನಿಲ್ಲಿಸುತ್ತೇನೆ : ಯಡಿಯೂರಪ್ಪ ಗುಡುಗು - ಮಂಡ್ಯ ವಿಧಾನ ಪರಿಷತ್ ಚುನಾವಣೆ

ಕರ್ನಾಟಕದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ. ಅದನ್ನ ನಿಲ್ಲಿಸುವ ಕೆಲಸವನ್ನ ನಾನೇ ಮಾಡುತ್ತೇನೆ. ಅದಕ್ಕಾಗಿ ನೀವೆಲ್ಲರೂ ಬಿಜೆಪಿ ಅಭ್ಯರ್ಥಿ ಮಂಜುಗೆ ಮತ ನೀಡಬೇಕು ಎಂದು ಬಿಎಸ್​​ವೈ ಮನವಿ ಮಾಡಿದರು.

ಮಾಜಿ‌ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾನ
ಮಾಜಿ‌ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾನ

By

Published : Dec 5, 2021, 9:23 PM IST

ಮಂಡ್ಯ :ಸಕ್ಕರೆ ನಾಡು ಮಂಡ್ಯದಲ್ಲಿ ಪರಿಷತ್ ಚುನಾವಣೆ ಅಖಾಡ ದಿನೇ ದಿನೇ ರಂಗೇರುತ್ತಿದೆ. ಇಂದು ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಪರ ಮಾಜಿ ಸಿಎಂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶನ ಮಾಡಿದರು. ಇದೇ ವೇಳೆ ಜೆಡಿಎಸ್ ಜೊತೆ ಮೈತ್ರಿ ಇಲ್ಲ ಎನ್ನುವ ಮೂಲಕ ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಸಕ್ಕರೆ ನಾಡಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ :

ಸಕ್ಕರೆ ನಾಡಿನಲ್ಲಿ ಎಂಎಲ್​ಸಿ ಚುನಾವಣೆ ರಂಗೇರಿದ್ದು, ಬಿಜೆಪಿ ಈ ಬಾರಿ ಕಮಲ ಅರಳಿಸಲು ಪಣತೊಟ್ಟಿದೆ. ಆ ಉದ್ದೇಶದಿಂದಲೇ ಮಂಡ್ಯ ನಗರಕ್ಕೆ ಆಗಮಿಸಿದ ಮಾಜಿ‌ ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಕ್ರೇನ್ ಮೂಲಕ ಬೃಹತ್ ಹೂವಿನ ಹಾರಿ ಹಾಕಿ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ಬಿಎಸ್​ವೈ ಕಾಳಿಕಾಂಭ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ‌ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾನ

ಸಮಾವೇಶದಲ್ಲಿ ಮಾತನಾಡಿದ ಬಿಎಸ್​ವೈ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದರು. ಕರ್ನಾಟಕದಲ್ಲಿ ಒಬ್ಬ, ಇಬ್ಬರಿಂದ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ. ಅದನ್ನ ನಿಲ್ಲಿಸುವ ಕೆಲಸವನ್ನ ನಾನೇ ಮಾಡುತ್ತೇನೆ. ಅದಕ್ಕಾಗಿ ನೀವೆಲ್ಲರೂ ಬಿಜೆಪಿ ಅಭ್ಯರ್ಥಿ ಮಂಜುಗೆ ಮತ ನೀಡಬೇಕು. 25 ಕ್ಷೇತ್ರಗಳ ಪೈಕಿ ಮಂಡ್ಯ ಸೇರಿದಂತೆ 15 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದ ಪ್ರವಾಸ ಮಾಡುತ್ತೇನೆ. ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನ ಹಾಕದ ಕಡೆ ಬೆಂಬಲ ಕೋರಿದ್ದೇವೆ ಅಷ್ಟೇ. ಅದರಲ್ಲಿ ಯಾವುದೇ ಗೊಂದಲ ಬೇಡ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಇದೇ ವೇಳೆ ಸಕ್ಕರೆ ನಾಡಿನ ಜನರ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಯಡಿಯೂರಪ್ಪ ಅವರು ರಾಜಾಹುಲಿ ಎಂದು ಬಿಎಸ್​​ವೈ ಶಕ್ತಿಯನ್ನ ಹೊಗಳಿದರು. ಮಂಡ್ಯದಲ್ಲಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎನ್ನುವ ಮೂಲಕ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಶಕ್ತಿ ಕೊಡಿ. ನೀವು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದರು. ಒಟ್ಟಾರೆ ಮಂಡ್ಯ ರಾಜಕೀಯ ಅಖಾಡದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಎಂಟ್ರಿಯಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ವರದಾನವಾಗಲಿದೆ ಎನ್ನಲಾಗುತ್ತಿದೆ. ಈ ಬಾರಿ ಮಂಡ್ಯದಲ್ಲಿ ಕಮಲ ಅರಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ABOUT THE AUTHOR

...view details