ಕರ್ನಾಟಕ

karnataka

ಮಂಡ್ಯ: ಕೆಪಿಸಿಸಿ ಅಧ್ಯಕ್ಷರ ವಿರುದ್ಧ FIR ದಾಖಲು

By

Published : Apr 3, 2023, 8:56 PM IST

Updated : Apr 3, 2023, 9:53 PM IST

ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಂದರ್ಭ ಕಲಾವಿದರತ್ತ 500 ರೂಪಾಯಿಗಳ ನೋಟು ಎಸೆದ ಘಟನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಪ್ರಕರಣ ದಾಖಲಾಗಿದೆ.

fir-filed-against-kpcc-president-dk-shivakumar
ಮಂಡ್ಯ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ FIR ದಾಖಲು

ಮಂಡ್ಯ : ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಕಲಾವಿದರತ್ತ 500 ರೂಪಾಯಿಗಳ ನೋಟುಗಳನ್ನು ಎಸೆದಿದ್ದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್‌ 28ರಂದು ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಆಯೋಜನೆಗೊಂಡಿತ್ತು.

ಮಂಡ್ಯ ತಾಲೂಕಿನ ಕ್ಯಾತುಂಗೆರೆಯಿಂದ ಡಿ.ಕೆ ಶಿವಕುಮಾರ್ ರೋಡ್‌ ಶೋ ಆರಂಭಿಸಿದ್ದರು. ಈ ವೇಳೆ, ಜಾನಪದ ಕಲಾ ತಂಡಗಳ ಕಲಾವಿದರು ಡಿಕೆಶಿ ಅವರನ್ನು ಹಣ ಕೊಡುವಂತೆ ಕೋರಿದ್ದರು. ಈ ಸಂದರ್ಭದಲ್ಲಿ ಅವರು ವಾಹನದ ಮೇಲಿಂದ ಕಲಾವಿದರತ್ತ 500 ನೋಟುಗಳ ಹಣದ ಕಟ್ಟು ಎಸೆದಿದ್ದರು. ಹಣ ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಸಂಬಂಧ ಚುನಾವಣೆ ಸೆಕ್ಟರ್‌ ಅಧಿಕಾರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಏ.2ರಂದು ಗ್ರಾಮಾಂತರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಎಫ್​ಐಆರ್​​ ವಿವರ: ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿ ಗ್ರಾಮದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ಕಲಾವಿದರಿಗೆ ಹಣ ವಿತರಣೆ ಮಾಡಿದ್ದರು. 2023ರ ಮಾರ್ಚ್​ 28 ಮಂಗಳವಾರದಂದು 2.30ರ ಸುಮಾರಿಗೆ ನಡೆದ ಪ್ರಜಾಧ್ವನಿ ರೋಡ್​ ಶೋ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅವರು ಕಲಾವಿದರತ್ತ 500 ರೂಪಾಯಿ ನೋಟುಗಳನ್ನು ಎಸೆದಿರುವ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿದ್ದು, ಇತರ ಸುದ್ದಿ ವಾಹಿನಿಗಳಲ್ಲೂ ಈ ದೃಶ್ಯ ಬಿತ್ತರವಾಗಿದೆ. ಆದ್ದರಿಂದ ಆರ್​ಸಿ ಆಕ್ಟ್​ ಕಾಯ್ದೆಯಡಿ ಕ್ರಮಕೈಗೊಳ್ಳಲು ಕೋರಲಾಗಿದೆ ಎಂದು ಎಫ್​ಐಆರ್​ ಪ್ರತಿಯಲ್ಲಿ ತಿಳಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ FIR ದಾಖಲು

ಬಿಜೆಪಿ ಹೇಳುವುದೆಲ್ಲ ಸುಳ್ಳು ಯಾವುದು ಸಫಲವಾಗಲ್ಲ :ಶ್ರೀರಂಗಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಡಿ.ಕೆ ಶಿವಕುಮಾರ್​​, ಶ್ರೀರಂಗಪಟ್ಟಣಕ್ಕೆ ದೊಡ್ಡ ಇತಿಹಾಸ ಇದೆ. ಮೈಸೂರು ಮಹಾರಾಜರು, ಸರ್.ಎಂ ವಿಶ್ವೇಶ್ವರಯ್ಯ ಅವರು ರೈತರ ಜಮೀನು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ನೀರಿನ ಸೌಲಭ್ಯ ಒದಗಿಸಿದ್ದಾರೆ. ರೈತರ ಬದುಕಿಗೆ ಸಂಪೂರ್ಣ ಆಶ್ರಯದಾತರಾಗಿದ್ದಾರೆ ಎಂದರು.

ಶ್ರೀರಂಗಪಟ್ಟಣದ ಬಗ್ಗೆ ಅಪಾರ ಗೌರವ, ವಿಶ್ವಾಸ ಎಲ್ಲವೂ ಇದೆ. ಎಲ್ಲಾ ಧರ್ಮಗಳಲ್ಲೂ ಇತಿಹಾಸ ಇದೆ. ಆದರೆ ಬಿಜೆಪಿಯವರು ಸುಳ್ಳಿನ ಇತಿಹಾಸ ಮಾಡಲು ಹೊರಟಿದ್ದರು. ನಾವು ಇದನ್ನು ಖಂಡಿಸಿದ್ದೇವೆ. ಸುಳ್ಳು ಸುಳ್ಳಾಗಿ ಉಳಿದುಕೊಳ್ಳುತ್ತದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮತ್ತು ಸಚಿವ ಅಶ್ವತ್ಥನಾರಾಯಣ್ ಜೊತೆಗೂಡಿ ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ದರು. ಅದು ಯಾವುದು ಸಫಲವಾಗಿಲ್ಲ ಎಂದು ಡಿಕೆ ಶಿವಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ :ಶ್ರೀರಂಗಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ: ಡಿಕೆಶಿಗೆ ಬೃಹತ್​ ಹಾರದ ಸ್ವಾಗತ, ಕಲಾವಿದರತ್ತ ನೋಟು ಎಸೆದ ಕೆಪಿಸಿಸಿ ಅಧ್ಯಕ್ಷ

Last Updated : Apr 3, 2023, 9:53 PM IST

ABOUT THE AUTHOR

...view details