ಮಂಡ್ಯ:ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ನಗರದ ಸರ್ ಎಂ ವಿ ಪ್ರತಿಮೆ ಎದುರು ಕಳೆದ 9 ದಿನದಿಂದ ನಡಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ ಎಂದು ರೈತ ಹಿತ ರಕ್ಷಣಾ ಸಮಿತಿ ಘೋಷಿಸಿದೆ.
ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರವಾಗಿ ನೀರು ಹರಿಸುತ್ತಿದ್ದ ಸರ್ಕಾರದ ವಿರುದ್ಧ ಪ್ರತಿಭಟನಾ ಧರಣಿ ನಡೆಸುತ್ತ ಬಂದಿದ್ದೆವು. ಇದೀಗ ರಾಜ್ಯ ಸರ್ಕಾರ ನೆರೆರಾಜ್ಯಕ್ಕೆ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಿರುವುದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ಸಮಿತಿಯ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸಮ್ಮುಖದಲ್ಲಿ ತಿಳಿಸಿದರು.
ಸಮಿತಿಯ ಮುಖಂಡರಾದ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಚಳವಳಿ ಸಿಲ್ವರ್ ಜ್ಯುಬಿಲಿ ಪಾರ್ಕಿನ ಹಿಪ್ಪೆ ಮರದ ಕೆಳಗೆ ನಡೆಯುತ್ತಿತ್ತು. ಹಿಪ್ಪೆ ಮರದ ಚಳವಳಿ ಎಂದೇ ಪ್ರಸಿದ್ಧಿ ಪಡೆದಿತ್ತು. ಕಾವೇರಿ ಕೊಳ್ಳದ ರೈತರ ಹಿತ ಕಾಪಾಡುವುದೇ ನಮ್ಮ ಪ್ರಮುಖ ಉದ್ದೇಶ. ಹಾಗಾಗಿ ನಿರಂತರವಾಗಿ ಹೋರಾಡುತ್ತ ಬಂದಿದ್ದೇವೆ. ಯಾವುದೇ ಸರ್ಕಾರ ಬರಲಿ ಕಾವೇರಿ ವಿಚಾರದಲ್ಲಿ ಎಲ್ಲರ ವಿರುದ್ಧವೂ ಹೋರಾಟ ಮಾಡಿದ್ದೇವೆ, ಮುಂದೆಯೂ ಹೋರಾಟ ನಿರಂತರವಾಗಿರಲಿದೆ ಎಂದು ಸಂದೇಶ ರವಾನಿಸಿದರು.