ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿದರು. ಮಂಡ್ಯ:ಬಿಜೆಪಿಯವರ ಕಚೇರಿಗೆ ಕುಮಾರಸ್ವಾಮಿ ಹೋಗಿದ್ದಾರೆ. ಅಂದ್ರೆ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ ಎಂದು ಅರ್ಥ. ಹೊಂದಾಣಿಕೆ ಸಂಬಂಧ ದೇವೇಗೌಡರು ಹಾಗೂ ಕುಮಾರಸ್ವಾಮಿ ದ್ವಂದ್ವ ನಿಲುವಿನ ವಿಚಾರದ ಬಗ್ಗೆ ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
''ಜೆಡಿಎಸ್ ಪಕ್ಷದಲ್ಲಿ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ. ದೇವೇಗೌಡರು ಈವರೆಗೂ ಪಕ್ಷವನ್ನ ಇನ್ನೊಂದು ಪಕ್ಷದೊಂದಿಗೆ ವಿಲೀನ ಮಾಡುವ ನಿರ್ಧಾರ ತಗೆದುಕೊಂಡಿಲ್ಲ. ಎಷ್ಟೇ ಸ್ಥಾನಗಳನ್ನ ಗೆಲ್ಲಲಿ ಹೋರಾಟ ಮಾಡ್ಕೊಂಡು ಬಂದಿದ್ದಾರೆ. ಇವತ್ತು ದೇವೇಗೌಡರು ಕಟ್ಟಿಬೆಳೆಸಿದ ಪಕ್ಷವನ್ನು ಬೇರೆ ಪಕ್ಷದೊಂದಿಗೆ ಸೇರಿಸುತ್ತಾರೆ ಎಂದರೇ ಸೇರಿಸಲಿ. ಅದು ಅವರ ಪಕ್ಷದ ತೀರ್ಮಾನ, ನಾವ್ಯಾಕೆ ಬೇಡ ಎನ್ನಲಿ. ಒಬ್ಬರು ಪೈಪೋಟಿ ಕೊಡಲು ಆಗಲ್ಲ ಅಂತಾ ಇಬ್ಬರು ಸೇರುತ್ತಿದ್ದಾರೆ. ನೋಡೋಣ ಜನರು ಅದರ ಬಗ್ಗೆ ಏನು ತೀರ್ಮಾನ ಮಾಡ್ತಾರೆ'' ಎಂದು ಕಿಡಿಕಾರಿದರು.
ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ:ಇನ್ನೂ ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಯಾವ ಕಾರಣಕ್ಕೆ ಆಗೆ ಹೇಳಿದ್ದಾರೋ ನಾನು ನೋಡಿಲ್ಲ. ಅದು ಅನವಶ್ಯಕವಾಗಿದ್ದು, ಬಹುಶಃ ಆಗೆ ಹೇಳಿರೋಕೆ ಸಾಧ್ಯವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ಥರಹದ ಆಲೋಚನೆಯೇ ಇಲ್ಲ. ಸಿಎಂ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವು ಸದೃಢವಾಗಿದೆ ಎಂದ ಅವರು, ಐದು ಗ್ಯಾರಂಟಿ ಕೊಟ್ಟಿರುವುದೇ ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಹೆಗ್ಗಳಿಕೆ. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ'' ಎಂದರು.
''ಬಿಜೆಪಿಯವರಿಗೆ ಯಾವುದೇ ಕೆಲಸವಿಲ್ಲ. ಬಿಜೆಪಿ, ಜೆಡಿಎಸ್ನ್ನು ಜನರು ನಂಬಲಿಲ್ಲ. ವಿರೋಧ ಪಕ್ಷದ ನಾಯಕನನ್ನ ಮಾಡಲು ಆಗಲಿಲ್ಲ. ಅವರ ಪರಿಸ್ಥಿತಿ ಏನು ಅಂತಾ ತಿಳಿದುಕೊಳ್ಳಬೇಕು ಎಂದ ಅವರು, ಬಿಜೆಪಿಗೆ ಜೆಡಿಎಸ್ ಅನಿವಾರ್ಯ, ಜೆಡಿಎಸ್ಗೆ ಬಿಜೆಪಿ ಅನಿವಾರ್ಯವಾಗಿದೆ'' ಎಂದು ಹೇಳಿದರು. ಕೃಷಿ ಸಚಿವರು ವಾರಕ್ಕೊಂದು ಬಾರಿ ನಾಗಮಂಗಲಕ್ಕೆ ಬಂದು ಕಲೆಕ್ಷನ್ ಮಾಡ್ತಾರೆ ಎಂಬ ಮಾಜಿ ಶಾಸಕ ಆರೋಪ ವಿಚಾರಕ್ಕೆ ಉತ್ತರಿಸಿದ ಅವರು, ''ಯಾರು ಸುರೇಶಗೌಡ್ರು? ಯಾರದ್ದೊ ಹೆಸರಿನಲ್ಲಿ, ಯಾವುದೋ ಗಳಿಗೆಯಲ್ಲಿ ಶಾಸಕರಾದವರು, ಲೀಡರ್ ಆಗೋಕೆ ಆಗಲ್ಲ. ನಮಗೆ ದುಡ್ಡಿಲ್ವಲ್ಲ ಎಲ್ಲ ಇವರೇ ಕೊಡುಸ್ತಿದ್ದಾರೆ'' ಎಂದು ನಗುತ್ತಲೆ ಸುರೇಶಗೌಡ ವಿರುದ್ದ ವ್ಯಂಗ್ಯವಾಗಿ ಹೇಳಿದರು.
''ನನಗೆ ಜಿಲ್ಲೆ ಅಭಿವೃದ್ದಿ ಕಮಿಟ್ಮೆಂಟ್ ಇದೆ. ಎಲ್ಲಿಗೆ ಹೋದರೂ ಜಿಲ್ಲೆಯ ನೆನಪಿಗೆ ಬರುತ್ತೆ. ಇಡೀ ರಾಜ್ಯದ ಜವಾಬ್ದಾರಿ ಜೊತೆಗೆ ಮಂಡ್ಯ ಜವಾಬ್ದಾರಿ ನನ್ನ ಮೇಲಿದೆ. ಸ್ವತಃ ಶಕ್ತಿ ಬೆಳೆಸಿಕೊಂಡವರು ನಾಯಕರಾಗ್ತಾರೆ. ಅವರು 5 ವರ್ಷ ಏನ್ ಮಾಡಿದ್ರು ಅಂತಾ ಜ್ಞಾಪಕ ಮಾಡ್ಕೋಬೇಕು. 7 ಜನ ಶಾಸಕರಿದ್ದರು. ಮಂತ್ರಿ ಇದ್ರು, 12 ತಿಂಗಳು ಸರ್ಕಾರ ಇತ್ತು. ಏನ್ ಮಾಡಿದ್ರು ಅಂತಾ ಜ್ಞಾಪಕ ಮಾಡ್ಕೊಳ್ಳಿ. ಅವರ ಹೇಳಿಕೆಗಳ ಬಗ್ಗೆ ದಮ್ಮಯ್ಯ ಅಂತೀನಿ ನನ್ನನ್ನು ಕೇಳಬೇಡಿ'' ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿ:ಕಂಡಕ್ಟರ್ ಜಗದೀಶ್ಗೆ ದುಡ್ಡು ಕೊಟ್ಟು ಹೇಳಿಕೆ ಕೊಡಿಸಿದ ಆರೋಪಕ್ಕೆ ಉತ್ತರಿಸಿದ ಅವರು, ''ಕಂಪ್ಲೈಟ್ ಕೊಟ್ಟವರು, ಅವರನ್ನ ದುರುಪಯೋಗ ಪಡಿಸಿಕೊಂಡವರು ಯಾರು ಎಂದು ಜನ ಮಾತನಾಡ್ತಿದ್ದಾರೆ. ಈ ಆರೋಪ ಬರುತ್ತೆ ಅಂತಾನೆ ಆಸ್ಪತ್ರೆಗೆ ಜಗದೀಶ್ ನೋಡಲು ಹೋಗಲಿಲ್ಲ. ಬದುಕಿಸಲು ಪ್ರಯತ್ನ ಪಡದೇ ಆಂಬ್ಯುಲೆನ್ಸ್ ತಡೀತಾರೆ. ಜೆಡಿಎಸ್ನವರು ಆಸ್ಪತ್ರೆಗೆ ಶಿಫ್ಟ್ ಮಾಡಿಸ್ಬೇಡಿ ಅಂತಾರೆ. ಜೆಡಿಎಸ್ನವರು ಅವರನ್ನು ಬದುಕಿಸಲು ತಯಾರಿದ್ರಾ? ಮನಸಾಕ್ಷಿಯನ್ನ ಕೇಳಿಕೊಳ್ಳೋಕೆ ಜೆಡಿಎಸ್ನವರಿಗೆ ಹೇಳಿ'' ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ:ಮಣಿಪುರದಲ್ಲಿ ಗಲಭೆ, ಅಲ್ಲಿನ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಗದೀಶ್ ಶೆಟ್ಟರ್