ಕಾವೇರಿ ಹೋರಾಟ ಹಿತರಕ್ಷಣಾ ಸಮಿತಿ ಸದಸ್ಯರಾದ ಅಂಬುಜಮ್ಮ ಅವರು ಮಾತನಾಡಿದ್ದಾರೆ ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ಈ ಬೆನ್ನಲ್ಲೇ ಮಂಡ್ಯ ಜಿಲ್ಲಾ ರೈತರ ರಕ್ಷಣಾ ಸಮಿತಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.
ನಗರದ ಸರ್ಎಂವಿ ಪ್ರತಿಮೆ ಎದುರು ಸಮಿತಿ ಸದಸ್ಯರ ಜೊತೆಗೂಡಿ ಮೈ ಶುಗರ್ ಕಬ್ಬು ಬೆಳೆಗಾರರ ಸಂಘ, ನೀರು ಬಳಕೆದಾರರ ಸಂಘದ ಕಾರ್ಯಕರ್ತರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಡಲು ಪ್ರಾಧಿಕಾರ ಆದೇಶ ಮಾಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಹೇಳಿದರು.
15 ದಿನಗಳ ಕಾಲ ನೀರು ಬಿಟ್ಟರೆ ಜಲಾಶಯ ಸಂಪೂರ್ಣ ಬರಿದಾಗಲಿವೆ. ಅನಂತರ ವಾಸ್ತವ ಸ್ಥಿತಿ ಅವಲೋಕಿಸಿದರೆ ಏನು ಪ್ರಯೋಜನ, ಕರ್ನಾಟಕ ಸರ್ಕಾರ ನ್ಯಾಯಾಲಯದಲ್ಲಿ ವಾಸ್ತವಾಂಶದ ಕುರಿತು ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡದೆ ಉದಾಸೀನ ಮಾಡಿರುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ಸಮನ್ವಯತೆ ಸಾಧಿಸಿ ಸಂಕಷ್ಟ ಕಾಲದಲ್ಲಿ ಮಾತುಕತೆ ಮೂಲಕ ಇತ್ಯರ್ಥ ಪಡಿಸದೆ, ಕರ್ನಾಟಕದ ರೈತರ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಈಗಲಾದರೂ ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಬೇಕು ಎಂದು ಹೇಳಿದರು.
ಚಾಮರಾಜನಗರದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಇಂದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಸತ್ಯಮಂಗಲಂ ರಸ್ತೆಯನ್ನು ತಡೆದು ಟೈರ್ ಗೆ ಬೆಂಕಿ ಹಾಕಿ, ಆಕ್ರೋಶ ಹೊರಹಾಕಿದರು.
ಚಾಮರಾಜನಗರದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಈ ವೇಳೆ ರೈತ ಮುಖಂಡ ಭಾಗ್ಯರಾಜ್ ಮಾತನಾಡಿ, ಈಗ ಕಾವೇರಿ ಉಳಿವಿಗಾಗಿ ಡಿ ಕೆ ಶಿವಕುಮಾರ್ ಅವರು ಮತ್ತೊಮ್ಮೆ ಪಾದಯಾತ್ರೆ ಮಾಡಲಿ ಎಂದು ಒತ್ತಾಯಿಸಿದರು.
ಪಾದಯಾತ್ರೆ ಮಾಡಿ ನಾವು ಕರ್ನಾಟಕದಿಂದ ನೀರು ಬಿಡಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ನೀರಾವರಿ ಸಚಿವರು ಈ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಿಮೀ ಗಟ್ಟಲೇ ಟ್ರಾಫಿಕ್ ಜಾಂ :ರಾಷ್ಟ್ರೀಯ ಹೆದ್ದಾರಿಯನ್ನು ತಡೆದಿದ್ದರಿಂದ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸರಕು ತುಂಬಿದ ವಾಹನಗಳು, ಬೈಕ್ ಸವಾರರು ಒಂದು ತಾಸು ಸಂಚರಿಸಲಾಗದೇ ಪರದಾಡಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತ ಪೊಲೀಸರು ರೈತ ಮುಖಂಡರನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್:ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುವುದಾಗಿ ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ನೀರಿನ ಕೊರತೆ ಇದೆ. ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟಿಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರ್ಕಾರವೇ ಮುಂದುವರಿಸಿದೆ ಎಂದು ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಾವೇರಿ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ; ಹೆಚ್ಚುವರಿ ನೀರು ಕೇಳಿದ ತಮಿಳುನಾಡು ಅರ್ಜಿ ತಿರಸ್ಕೃತ