ಮಂಡ್ಯ:''ರಾಜ್ಯ ಸರ್ಕಾರ ನಮ್ಮ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಹಾಗೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದ ಹಿನ್ನೆಲೆ ಕರುನಾಡಿಗೆ ಕಾವೇರಿ ನೀರಿನ ಸಂಕಷ್ಟ ಎದುರಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮಾಜಿ ಸಚಿವರು ಹಾಗೂ ಶಾಸಕರೊಂದಿಗೆ ಕನ್ನಂಬಾಡಿ ಅಣೆಕಟ್ಟು ವೀಕ್ಷಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪ್ರಾಧಿಕಾರವು ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ಬಿಡಬೇಕು ಎಂದು ಆದೇಶಿಸಿದೆ. ನಮ್ಮವರು ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ. ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳು 15 ಜನ ಇರ್ತಾರೆ. ಸಭಾತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ನಮ್ಮವರಿಗೆ ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣಾ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಲು ತಿಳಿಸಿದ್ದೆ. ನಮಗೆ ಪೇಪರ್, ಪೆನ್ ಕೊಡಿ ನಿಮ್ಮನ್ನು ಉಳಿಸುತ್ತೇವೆ ಎಂದು ನೀರಾವರಿ ಸಚಿವರು ಕೇಳಿದ್ರು. ರೈತರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಆದ್ರೆ, ಇದೀಗ ರೈತರೇ ಕೋರ್ಟ್‌ಗೆ ಹೋಗಿ ಅಂತಾರೆ, ಇದು ಸರ್ಕಾರದ ನಡೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ರೈತರ ಬೆಳೆ ಉಳಿಸಿಕೊಳ್ಳಲು ನೀರಿನ ಅನಿವಾರ್ಯತೆ ಇದೆ. ಐದು ವರ್ಷಕ್ಕೊಮ್ಮೆ ಈ ರೀತಿ ಬರ ಪರಿಸ್ಥಿತಿ ಎದುರಾಗುತ್ತದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇದರಿಂದ ಬೇಸತ್ತ ರೈತಪರ, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ'' ಎಂದರು.
''ಕಳೆದ ಒಂದು ತಿಂಗಳಿನಿಂದ ತಮಿಳುನಾಡಿಗೆ ಹರಿದು ಹೋಗಿರುವ ನೀರನ್ನು ನಿಲ್ಲಿಸಿದ್ರೆ, ನಮ್ಮ ರೈತರನ್ನು ಉಳಿಸಬಹುದಿತ್ತು. ಆದ್ರೆ ಇವರು ಪ್ರಾಧಿಕಾರ ಹೇಳಿದ ತಕ್ಷಣ ನೀರು ಬಿಟ್ಟರು. ಕೋರ್ಟ್ ನಮ್ಮ ಮುಂದೆ ಬರಬೇಡಿ, ನೀವು ಕೂತು ತೀರ್ಮಾನ ಮಾಡಿಕೊಳ್ಳಿ ಅಂತಾ ತಿಳಿಸಿದೆ. ನ್ಯಾಯಾಂಗ ನಿಂದನೆ ಬೆದರಿಕೆಯಿಂದ ಇವರು ನೀರು ಹರಿಸಲು ಮುಂದಾಗಿದ್ದಾರೆ. ಇದು ಸರಿಯಲ್ಲ'' ಎಂದು ಗರಂ ಆದರು.
''2013ರಲ್ಲಿ ಜ್ಞಾನಿಚಂದ್ ಎಂಬಾತ ಸುಪ್ರೀಂಕೋರ್ಟ್‌ಗೆ ಆಂಧ್ರ ಪ್ರದೇಶದ ನೀರಾವರಿ ವಿಚಾರವಾಗಿ ಅರ್ಜಿ ಹಾಕಿದ್ದ. ಅಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು ಹೇಳಿದ್ರು. ಆಗ ಪಾಲಿಸಲಾಗದ ಆದೇಶವನ್ನು ಪಾಲಿಸಲು ಆಗದೇ ಇರುವುದು, ನ್ಯಾಯಾಂಗ ನಿಂದನೆ ಆಗಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಉದಾಹರಣೆ ತೆಗೆದುಕೊಂಡು ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು'' ಎಂದು ಸಲಹೆ ನೀಡಿದರು.