ಮಂಡ್ಯ:ಸಕ್ಕರೆನಾಡು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂದು ಉಸ್ತುವಾರಿ ಗೈರಿನಲ್ಲಿ ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ಸಚಿವ ಅಶ್ವತ್ಥ್ ನಾರಾಯಣ್ ಮುಂದಾಗಿದ್ದು, ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ಮಂಡ್ಯ ತಾಲೂಕು ಸಾತನೂರು ಗ್ರಾಮದ ಕಂಬದ ನರಸಿಂಹ ದೇವಸ್ಥಾನ ಆವರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಸಭೆಯನ್ನು ಉದ್ಘಾಟಿಸಿದರು.
ಪಕ್ಷ ಸಂಘಟನೆ ಉದ್ದೇಶದಿಂದ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಅಶೋಕ್ ಜರಾಯಂ ಸೇರಿ ಮೊದಲಾದವರು ಭಾಗಿಯಾಗಿದ್ದರು. ಇದಕ್ಕೂ ಮೊದಲು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ನಿರುತ್ಸಾಹ ತೋರಿದರು.
ಉಸ್ತುವಾರಿ ತೀರ್ಮಾನ ಸಿಎಂ ನೋಡಿಕೊಳ್ಳುತ್ತಾರೆ:"ಮಂಡ್ಯ ಉಸ್ತುವಾರಿ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ, ಎಲ್ಲಾ ಸಿಎಂ ನೋಡಿಕೊಳ್ಳುತ್ತಾರೆ. ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವುದು ಸಿಎಂ. ಮಂಡ್ಯ ಉಸ್ತುವಾರಿ ನೇಮಕ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ನಾನು ಇವತ್ತು ಪಕ್ಷದ ಕಾರ್ಯಕ್ರಮ ಇರುವುದರಿಂದ ಮಂಡ್ಯಗೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡಲು ನಾನು ಇಲ್ಲಿ ಬಂದಿದ್ದೇನೆ. ಖಾಲಿ ಇರುವ ಉಸ್ತುವಾರಿಯನ್ನು ಸದ್ಯ ಸಿಎಂ ನಿರ್ವಹಣೆ ಮಾಡುತ್ತಿರುತ್ತಾರೆ" ಎಂದರು.
"ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಿಯ ಮಾಡುತ್ತಾರೆ. ಸಿಎಂ ಯಾರನ್ನು ನಿಶ್ಚಯಿಸುತ್ತಾರೆ ಅವರು ಕೆಲಸ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷ ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ಯಾರಿಗೆ ಮಂಡ್ಯ ಉಸ್ತುವಾರಿ ನೀಡಿದರು ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ ಬಾಂಧವ್ಯ ಇರುವುದು ಒಂದು ಭಾಗ. ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಮುಖ್ಯಮಂತ್ರಿಗಳು ಸೂಕ್ತ ಎನ್ನಿಸಿದವರಿಗೆ ಕೊಡುತ್ತಾರೆ. ನನಗೆ ಉಸ್ತುವಾರಿ ನೀಡುವ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಯಾವ ಕಾಲದಲ್ಲಿ ಸಿಎಂ ಜವಾಬ್ದಾರಿ ನೀಡುತ್ತಾರೋ ಅದನ್ನು ನಿರ್ವಹಿಸುವುದು ನಮ್ಮ ಕೆಲಸ" ಎಂದರು.