ಮಂಡ್ಯ:ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ 15 ದಿನಗಳ ಅಂತರದಲ್ಲಿಯೇ ತಂದೆ- ತಾಯಿಯನ್ನು ಕಳೆದುಕೊಂಡ ಐದು ದಿನದ ಮಗು ಇದೀಗ ತಬ್ಬಲಿಯಾಗಿದೆ.
ನಾಗಮಂಗಲ ತಾಲೂಕಿನ ದೊಡ್ಡನಹಳ್ಳಿ ಗ್ರಾಮದ ನಂಜುಂಡೇಗೌಡ (45) ಹಾಗೂ ಮಮತಾ (31) ಹಲವು ವರ್ಷದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ವಾಸವಿದ್ದರು. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ನಂಜುಂಡೇಗೌಡ ಅವರಿಗೆ ಏಪ್ರಿಲ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಏ. 30 ರಂದು ಮೃತಪಟ್ಟಿದ್ದರು. ಬಳಿಕ ಸ್ವಗ್ರಾಮಕ್ಕೆ ಶವವನ್ನು ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ಪತಿಗೆ ಪಾಸಿಟಿವ್ ಇದ್ದ ಹಿನ್ನೆಲೆಯಲ್ಲಿ ಗರ್ಭಿಣಿ ಪತ್ನಿಗೂ ನಾಗಮಂಗಲದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ಖಾತ್ರಿಯಾಗಿತ್ತು. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಗೆ ದಾಖಲಿಸಲಾಗಿತ್ತು. ಈ ನಡುವೆ ಮೇ 11ರಂದು ಮಮತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೇ 14 ರಂದು (ಶುಕ್ರವಾರ) ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದಂಪತಿಗೆ ಬರೋಬ್ಬರಿ 9 ವರ್ಷದ ನಂತರ ಮಗುವಾಗಿತ್ತು. ಆದರೆ ವಿಧಿ ಆ ಮಗು ತಂದೆ, ತಾಯಿಯ ಪ್ರೀತಿಯಿಂದ ವಂಚಿತವಾಗುವಂತೆ ಮಾಡಿರುವುದು ದುರಂತವೇ ಸರಿ.
ಓದಿ: ಹುಟ್ಟುವ ಕಂದನಿಗಾಗಿ ಪಾದರಕ್ಷೆ ಖರೀದಿಸಿದ್ದ ಅಮ್ಮ.. ಚಿಕಿತ್ಸೆ ಫಲಿಸದೆ ಗರ್ಭಿಣಿ ವಿಧಿವಶ