ಮಂಡ್ಯ: ತಾಲೂಕಿನ ತೂಬಿನಕೆರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದ ಶೆಡ್ನಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸಂಘಟನೆಯೊಂದು ಶೆಡ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ತೂಬಿನಕೆರೆ ಗ್ರಾಪಂ ಪಿಡಿಒ ಸ್ವಾಮಿ ಮಾತನಾಡಿ, "ಡಿ.13ನೇ ತಾರೀಖು ನಡೆದ ಸಾಮಾನ್ಯ ಸಭೆಯಲ್ಲಿ ಶೆಡ್ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ನಮ್ಮ ಗಮನಕ್ಕೆ ತಂದರು. ಸಾಮಾನ್ಯ ಸಭೆ ಮುಗಿದ ತಕ್ಷಣ ಕಾರ್ಯದರ್ಶಿಯವರನ್ನು ಕಳುಹಿಸಿ ಶೆಡ್ ಮಾಲೀಕರ ಮನೆಗೆ ನೋಟಿಸ್ ತಲುಪಿಸಿ ಶೆಡ್ನಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸುವಂತೆ ತಿಳಿಸಿದ್ದೆವು. ಎರಡು ದಿನಗಳು ಕಳೆದರೂ ತ್ಯಾಜ್ಯವನ್ನು ತೆರವುಗೊಳಿಸಿರಲಿಲ್ಲ, ಈ ಸಂಬಂಧ ಗ್ರಾಮಸ್ಥರೊಬ್ಬರು ನಮಗೆ ಕರೆ ಮಾಡಿ ಮಾಹಿತಿ ನೀಡಿದರು. ನಾವು ಮತ್ತೆ ಶೆಡ್ ಮಾಲೀಕರಿಗೆ ತ್ಯಾಜ್ಯ ತೆರವು ಮಾಡುವಂತೆ ಹೇಳಿದಾಗ ಅವರು ಮಾಡುತ್ತೇವೆ ಎಂದಿದ್ದರು" ಎಂದು ಹೇಳಿದರು.