ಮಂಡ್ಯ: ಕೆಆರ್ಎಸ್ ಜಲಾಶಯದಿಂದ 15 ಗೇಟ್ಗಳ ಮೂಲಕ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ನೀರು ಹೊರ ಬಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಹರಿದುಬಂದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ 123 ಅಡಿ ನೀರು ಭರ್ತಿಯಾಗುತ್ತಿದ್ದಂತೆ ನೀರು ಹೊರಬಿಡಲಾಗಿದೆ. 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ನಿನ್ನೆ ಮಧ್ಯಾಹ್ನದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. 123 ಅಡಿ ಭರ್ತಿಯಾಗುತ್ತಿದ್ದಂತೆ ಹೊರಹರಿವಿನ ಪ್ರಮಾಣವನ್ನು ಅಧಿಕಾರಿಗಳು ಹೆಚ್ಚಿಸಿದರು. ಸದ್ಯ ಡ್ಯಾಂಗೆ 30,216 ಒಳ ಹರಿವು ಇದ್ದು, ಸಂಜೆ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವನ್ನು ಹೆಚ್ಚಿಸಲಾಗುತ್ತದೆ.