ಕೊಪ್ಪಳ:ಮೂಢ ನಂಬಿಕೆಗಳು ಇಂದಿಗೂ ಜೀವಂತವಾಗಿವೆ. ರಾಶಿ, ನಕ್ಷತ್ರ ನೋಡಿ ಮನುಷ್ಯನ ಬದುಕಿನ ಆಗುಹೋಗುಗಳ ಬಗ್ಗೆ ತಿಳಿಸುವ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಜನರಿಗೇನು ಕೊರತೆ ಇಲ್ಲ. ಅಂತೆಯೇ ರಾಶಿ-ನಕ್ಷತ್ರಗಳಿಗೂ ಒಂದೊಂದು ಮರಗಳಿವೆ. ಇಂತಹ ರಾಶಿ ನಕ್ಷತ್ರಗಳ ಅಪರೂಪದ ವನವೊಂದು ಗಮನ ಸೆಳೆಯುತ್ತಿದೆ. ಅದರ ಕಂಪ್ಲೀಟ್ ಮಾಹಿತಿಯನ್ನು ನಾವ್ ನಿಮ್ಗೆ ತಿಳಿಸ್ತೇವೆ...
ಪೌರಾಣಿಕ ಹಿನ್ನೆಲೆಯ ವಾಲಿ ಪರ್ವತದಲ್ಲಿದೆ ನಕ್ಷತ್ರವನ... ರಾಶಿ-ನಕ್ಷತ್ರ ದೋಷಕ್ಕೆ ಇಲ್ಲಿದೆಯಂತೆ ಪರಿಹಾರ! - kannadanews
ರಾಶಿ ನಕ್ಷತ್ರ ದೋಷವಿರುವ ಜನರು ದೋಷ ಪರಿಹರಿಸಿಕೊಳ್ಳಲು ಕೊಪ್ಪಳ ಜಿಲ್ಲೆಯ ವಾಲಿ ಪರ್ವತದಲ್ಲಿರುವ ಮರಗಿಡಗಳಿಗೆ ಬಂದು ಪೂಜೆ ಮಾಡುತ್ತಾರೆ. ಇದರ ಹಿಂದೆ ಒಂದು ಬಲವಾದ ನಂಬಿಕೆ ಸಹ ಇದೆ.
ಜ್ಯೋತಿಷ್ಯ ಶಾಸ್ತ್ರವನ್ನು ನಂಬುವಂಥ ಜನರ ರಾಶಿ ನಕ್ಷತ್ರಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯಿರುವ ಪೌರಾಣಿಕ ಹಿನ್ನೆಲೆವುಳ್ಳ ವಾಲಿ ಪರ್ವತದಲ್ಲಿ ರಾಶಿ-ನಕ್ಷತ್ರ ಸಂಬಂಧಿತ ವನವಿದೆ. ರಾಶಿ- ನಕ್ಷತ್ರ ದೋಷವಿರುವ ಜನರು ದೋಷ ಪರಿಹಾರಕ್ಕಾಗಿ ನಾನಾ ರೀತಿಯಾದಂತಹ ಪೂಜೆ-ಪುನಸ್ಕಾರಗಳನ್ನು ಇಲ್ಲಿ ನೆರವೇರಿಸುತ್ತಾರೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು ಹಾಗೂ 12 ರಾಶಿಗಳಿವೆ. 27 ನಕ್ಷತ್ರಗಳು ಹಾಗೂ ದ್ವಾದಶ ರಾಶಿಗಳಿಗೆ ಒಂದೊಂದು ಮರದಂತೆ ಇಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋದು ಜ್ಯೋತಿಶಾಸ್ತ್ರದ ನಂಬಿಕೆ. ಹೀಗಾಗಿ ಒಂದೊಂದು ನಕ್ಷತ್ರ ಮತ್ತು ರಾಶಿಗೆ ಒಂದೊಂದು ಮರವನ್ನ ವಾಲಿ ಪರ್ವತದಲ್ಲಿ ಬೆಳೆಸಲಾಗಿದೆ.
ಇಲ್ಲಿ ನಕ್ಷತ್ರವನ, ರಾಶಿವನ, ನವದುರ್ಗೆಯರ ವನ, ಅಷ್ಟದಿಕ್ಪಾಲಕರ ವನ, ಶಿವ ಪಂಚಾಯಿತಿ, ಸರಸ್ವತಿ ವನ, ನಂದನವನ, ನವಗ್ರಹ ವನ ಸೇರಿದಂತೆ ಒಟ್ಟು 11 ವನಗಳಿವೆ. ರಾಶಿ ಮತ್ತು ನಕ್ಷತ್ರ ದೋಷವಿರುವ ಜನರು ಈ ನಕ್ಷತ್ರ ಮತ್ತು ರಾಶಿ ವನಕ್ಕೆ ಬಂದು ತಮಗೆ ಸಂಬಂಧಿಸಿದ ರಾಶಿ ಮತ್ತು ನಕ್ಷತ್ರದ ಗಿಡಗಳಿಗೆ ನೀರು ಹಾಕಿ ನಮಿಸಿದರೆ ದೋಷ ಪರಿಹಾರವಾಗುತ್ತದೆ ಅಂತಾರೆ ಇಲ್ಲಿನ ಆಶ್ರಮದ ಶಂಕರ ಸ್ವಾಮೀಜಿ.
ವಾಲಿ ಪರ್ವತದಲ್ಲಿ ಈ 11 ವನಗಳನ್ನು ನಿರ್ಮಾಣದ ಹಿಂದಿರೋರು ಅಲ್ಲಿರುವ ಬ್ರಹ್ಮಯ್ಯ ಸ್ವಾಮೀಜಿ. ರಾಶಿ ನಕ್ಷತ್ರಕ್ಕೆ ಸಂಬಂಧಿಸಿದ ಎಲ್ಲ ಮರಗಳನ್ನು ರಾಜ್ಯಾದ್ಯಂತ ಹುಡುಕಾಡಿ ತಂದ ಅವರು ಬ್ರಹ್ಮಯ್ಯ ಈ ರಾಶಿನಕ್ಷತ್ರ ವನವನ್ನು ನಿರ್ಮಿಸದ್ದರು ಎನ್ನಲಾಗ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎಲ್ಲ ಮರಗಳು ರಾಶಿ, ನಕ್ಷತ್ರಕ್ಕೆ ಸಂಬಂಧಿಸಿದ್ದವು ಎಂದು ಹೇಳುತ್ತಾರೆ. ಇವುಗಳನ್ನು ಮೂಡನಂಬಿಕೆಯೆನ್ನಬೇಕೋ ಜನರ ಧಾರ್ಮಿಕ ನಂಬಿಕೆಗಳು ಎನ್ನಬೇಕೋ ಅದು ಅವರವರ ನಂಬಿಕೆ ಹಾಗೂ ದೃಷ್ಟಿಕೋನಗಳಿಗೆ ಬಿಟ್ಟ ವಿಚಾರ. ಅದೇನೆ ಇರಲಿ ನಮ್ಮ ಪೂರ್ವಜರು ಪ್ರಕೃತಿಯ ಆರಾಧಕರಾಗಿದ್ದರು. ಪ್ರಕೃತಿಯೇ ಎಲ್ಲದರ ಮೂಲ ಎಂಬುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ.