ಗಂಗಾವತಿ:ಕೊರೊನಾಪೀಡಿತ ವ್ಯಕ್ತಿಯ ಮೃತದೇಹವನ್ನು ಗ್ರಾಮಕ್ಕೆ ತಂದಿದ್ದು ಗ್ರಾಮಸ್ಥರು ಆತಂಕಗೊಂಡು ಪಂಚಾಯಿತಿ ಸಿಬ್ಬಂದಿ ಮೇಲೆ ಒತ್ತಡ ಹೇರಿ ಇಡೀ ಗ್ರಾಮಕ್ಕೆ ಔಷಧಿ ಸಿಂಪಡಣೆ ಮಾಡಿಸಿದ್ದಾರೆ. ಈ ಘಟನೆ ತಾಲ್ಲೂಕಿನ ಸಂಗಾಪುರದಲ್ಲಿ ನಡೆದಿದೆ.
ಅಂದಾಜು 53 ವರ್ಷದ ವ್ಯಕ್ತಿಯೊಬ್ಬರು ಕಳೆದ ಹಲವು ವರ್ಷದಿಂದ ಹಿರೇಜಂತಕಲ್ ಪ್ರದೇಶದಲ್ಲಿ ವಾಸವಿದ್ದರು. ಇವರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಕೆಲ ದಿನಗಳ ಬಳಿಕ ಅವರು ಚೇತರಿಕೆ ಕಾಣದೆ ಸಾವನ್ನಪ್ಪಿದ್ದರು.
ಸೋಂಕಿತ ವ್ಯಕ್ತಿಯ ಮೃತದೇಹ ತಂದ ಹಿನ್ನೆಲೆಯಲ್ಲಿ ಕಟ್ಟಡಗಳಿಗೆ ಸ್ಯಾನಿಟೈಸ್ ಮಾಡುತ್ತಿರುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತಂದಾಗ, ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಮೃತದೇಹವನ್ನು ವಾಪಸ್ ಕಳುಹಿಸುವಲ್ಲಿ ಸಫಲರಾಗಿದ್ದರು.
ಮೃತದೇಹವನ್ನು ಗ್ರಾಮಕ್ಕೆ ತಂದಿರುವುದರಿಂದ ವೈರಸ್ ಹರಡಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮದ ನೂರಾರು ಜನ ಪಂಚಾಯಿತಿಗೆ ತೆರಳಿ ಗ್ರಾಮಕ್ಕೆ ಸ್ಯಾನಿಟೈಸ್ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಇದೀಗ ಇಡೀ ಗ್ರಾಮಕ್ಕೆ ಔಷಧ ಸಿಂಪಡಣೆ ಮಡಲಾಗುತ್ತಿದೆ.