ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದಲ್ಲಿ ಅನಧಿಕೃತ ಬ್ಯಾನರ್ ಗಳನ್ನು ಬೆಳ್ಳಂಬೆಳಗ್ಗೆ ಪುರಸಭೆಯ ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ಅವರ ಮಾರ್ಗದರ್ಶನದಲ್ಲಿ ಪೌರ ಕಾರ್ಮಿಕರು ತೆರವುಗೊಳಿಸಿದರು.
ಇಂದು ಬೆಳಗ್ಗೆ ಪುರಸಭೆಯ ವಾಹನದ ಜೊತೆಗೆ ಆಗಮಿಸಿದ ಪೌರ ಕಾರ್ಮಿಕರು, ಬಸವೇಶ್ವರ, ಕನಕದಾಸ, ಮಾರುತಿ, ಟಿಪ್ಪು ಸುಲ್ತಾನ್, ಮಲ್ಲಯ್ಯ ವೃತ್ತಗಳಲ್ಲಿ ಪುರಸಭೆಯ ಅನುಮತಿ ಪಡೆದುಕೊಳ್ಳದೆ ಹಾಕಲಾಗಿದ್ದ ಬ್ಯಾನರ್ಗಳನ್ನು ತೆರವುಗೊಳಿಸಲಾಯಿತು.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ವಿವಿಧ ಅಂಗಡಿ-ಮುಂಗಟ್ಟುಗಳ ಶುಭಾಶಯ ಕೋರುವ ಬ್ಯಾನರ್ ಹಾಕಿದ್ದರು. ಪುರಸಭೆಗೆ ಬ್ಯಾನರ್ ಅಳವಡಿಸುವ ಕುರಿತು ತೆರಿಗೆ ಹಣ ಪಾವತಿಸದೇ ಬೇಕಾಬಿಟ್ಟಿಯಾಗಿ ಬ್ಯಾನರ್ ಹಾಕಲಾಗಿದ್ದು, ಅಂತಹ ಬ್ಯಾನರ್ ಗಳನ್ನು ತೆರವುಗೊಳಿಸಿ ಪುರಸಭೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಕುರಿತು ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ಪ್ರತಿಕ್ರಿಯಿಸಿ ಅನುಮತಿ ಪಡೆದುಕೊಳ್ಳದೆ ಬ್ಯಾನರ್ ಹಾಕಲಾಗಿದ್ದ ಬ್ಯಾನರ್ಗಳನ್ನು ಪುರಸಭೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧಿಕೃತ ಬ್ಯಾನರ್ಗಳ ಮಾಲೀಕರು ಪುರಸಭೆಗೆ ಬಂದು ಹಣ ಪಾವತಿಸಿದರೆ ಮರಳಿ ಅವರಿಗೆ ಬ್ಯಾನರ್ ನೀಡಲಾಗುವುದು ಎಂದು ತಿಳಿಸಿದರು.