ಕೊಪ್ಪಳ:ಜೈನಕಾಶಿ ಎಂಬ ಪ್ರಖ್ಯಾತಿಯ ಕೊಪ್ಪಳದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷದಿಂದ ತ್ರಿಕೋನ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ. ಪಕ್ಷಗಳ ಅಭ್ಯರ್ಥಿಗಳು ಮತಬೇಟೆಗೆ ಇಳಿದಾಗಿದೆ.
ಬಹುವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಬಂದಿರುವ ಕರಡಿ ಮತ್ತು ಹಿಟ್ನಾಳ್ 'ಕುಟುಂಬ ರಾಜಕಾರಣ'ಕ್ಕೆ ಈ ಬಾರಿ ಮತದಾರರು ಬ್ರೇಕ್ ಹಾಕಲಿದ್ದಾರಾ? ಅನ್ನೋದನ್ನು ಕಾದುನೋಡಬೇಕಿದೆ. ಕೊಪ್ಪಳದಲ್ಲಿ ಇಲ್ಲಿವರೆಗೂ ಕರಡಿ ಮತ್ತು ಹಿಟ್ನಾಳ್ ಕುಟುಂಬಗಳ ಮಧ್ಯೆ ನೇರ ಸ್ಪರ್ಧೆ ಇರುತ್ತಿತ್ತು. ಈ ಬಾರಿ ಬಿಜೆಪಿ ಟಿಕೆಟ್ ವಂಚಿತ ಸಿ.ವಿ.ಚಂದ್ರಶೇಖರ ಜೆಡಿಎಸ್ನಿಂದ ಸ್ಪರ್ಧಿಸಿದ್ದು ಪೈಪೋಟಿ ಹೆಚ್ಚಾಗಿದೆ.
ಕ್ಷೇತ್ರದ ಇತಿಹಾಸ:ಜೈನಕಾಶಿ ಎಂಬ ಐತಿಹಾಸಿಕ ಪ್ರಸಿದ್ಧಿಯ ಕೊಪ್ಪಳ ಸಾಹಿತ್ಯಿಕ, ಸಾಮಾಜಿಕವಾಗಿ ತನ್ನದೇ ಮಹತ್ವ ಹೊಂದಿದೆ. ಜಾತ್ರೆಯ ಮೂಲಕ ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಪ್ರಸಿದ್ಧಿ ಪಡೆದಿರುವ ಗವಿಸಿದ್ದೇಶ್ವರ ಮಠ, ಶಕ್ತಿ ದೇವತೆ ಹುಲಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ, ಸಾಮ್ರಾಟ್ ಅಶೋಕನ ಶಿಲಾಶಾಸನಗಳು, ಶಿವನ ಕುರಿತು ಅರ್ಜುನ ತಪಸ್ಸನ್ನಾಚರಿಸಿ ಪಾಶುಪತಾಸ್ತ್ರ ಪಡೆದ ಇಂದ್ರಕಿಲ ಪರ್ವತದಂತಹ ಮಹತ್ವದ ಸ್ಥಳಗಳನ್ನು ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಒಂದು ನಗರಸಭೆ, ಒಂದು ಪಟ್ಟಣ ಪಂಚಾಯಿತಿ ಹಾಗೂ 102 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ರಚನೆಯಾಗಿದ್ದು 1952 ರಲ್ಲಿ. ಆರಂಭದಲ್ಲಿಯೇ ಕ್ಷೇತ್ರದಲ್ಲಿ ಮೊದಲ ಮಹಿಳೆಯೊಬ್ಬರು ಶಾಸಕಿಯಾಗಿ ಆಯ್ಕೆಯಾಗಿದ್ದರು ಅನ್ನೋದು ವಿಶೇಷ.
ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಯಾರು ಗೊತ್ತೇ?: 1952ರಲ್ಲಿ ಲೋಕಸೇವಕ ಸಂಘದ ಮಹಾದೇವಮ್ಮ ಎಂಬವರು ಈ ಕ್ಷೇತ್ರದ ಮೊದಲ ಮಹಿಳಾ ಶಾಸಕಿ. ಇವರ ಬಳಿಕ ಇಲ್ಲಿ ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿಲ್ಲ. ಕ್ಷೇತ್ರದಲ್ಲಿ 1994 ರಿಂದ ಚುನಾವಣೆ ಅಂದ್ರೆ, ಅದು ಸಂಗಣ್ಣ ಕರಡಿ ಹಾಗೂ ಕೆ.ಬಸವರಾಜ ಹಿಟ್ನಾಳ್ ಕುಟುಂಬದ ನಡುವಿನ ಹೋರಾಟವೆಂದೇ ಎಂದೇ ಹೇಳಬಹುದು. ಈ ಎರಡೂ ಕುಟುಂಬಗಳು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗುತ್ತಾರೆ. ಪರ್ಯಾಯ ನಾಯಕರನ್ನು ಬೆಳೆಸದೇ ಇರೋದು ಇದಕ್ಕೆ ಪ್ರಮುಖ ಕಾರಣ. ಆದರೆ, ಈ ಬಾರಿ ಬಿಜೆಪಿ ಟಿಕೆಟ್ ಕರಡಿ ಕುಟುಂಬದ ಮಹಿಳೆ ಮಂಜುಳಾ ಕರಡಿಯವರಿಗೆ ನೀಡಿದ್ದು, ಚುನಾವಣೆಯಲ್ಲಿ ಗೆದ್ದರೆ ಅವರೇ ಕೊಪ್ಪಳ ಜಿಲ್ಲೆಯ 2ನೇ ಮಹಿಳಾ ಶಾಸಕಿಯಾಗಲಿದ್ದಾರೆ.
ಕರಡಿ ಬಿಟ್ರೆ ಹಿಟ್ನಾಳ್, ಹಿಟ್ನಾಳ್ ಬಿಟ್ರೆ ಕರಡಿ:1994 ರಿಂದಲೂ ಕೊಪ್ಪಳ ಕ್ಷೇತ್ರದಲ್ಲಿ ಒಂದೋ ಕರಡಿ ಕುಟುಂಬ ಇರಬೇಕು, ಇಲ್ಲವೇ ಹಿಟ್ನಾಳ್ ಮನೆತನದವರು ಅಧಿಕಾರದಲ್ಲಿರಬೇಕು ಎಂಬುದು ಸರ್ವೇ ಸಾಮಾನ್ಯವಾಗಿದೆ. 1994 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕರಡಿ ವಿಧಾನಸಭೆ ಪ್ರವೇಶ ಮಾಡಿದ್ದರು. 1999ರಲ್ಲಿ ಜೆಡಿಯುನಿಂದ ಸ್ವರ್ಧಿಸಿದ್ದ ಸಂಗಣ್ಣ ಕರಡಿ, ಗೆಲುವಿನ ನಗೆ ಬೀರಿದ್ದರು. ಆಗಲೂ ಸಹ ಕೆ. ಬಸವರಾಜ ಹಿಟ್ನಾಳ್ ಸೋಲುಂಡಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕೆ. ಬಸವರಾಜ ಹಿಟ್ನಾಳ್ ಅವರು ಕರಡಿ ಸಂಗಣ್ಣಗೆ ಸೋಲಿನ ರುಚಿ ತೋರಿಸಿದ್ದರು. 2008ರಲ್ಲಿ ಜೆಡಿಎಎಸ್ನಿಂದ ಕರಡಿ ಸಂಗಣ್ಣ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಕೆ. ಬಸವರಾಜ ಹಿಟ್ನಾಳ್ಗೆ ಮತ್ತೆ ಸೋಲಿನ ರುಚಿ ತೋರಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ 2011ರಲ್ಲಿ ಸಂಗಣ್ಣ ಕರಡಿ ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡರು. 2011ರಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಆದರೆ, ಕೊಪ್ಪಳ ಕ್ಷೇತ್ರದ ಮತದಾರ ಬದಲಾವಣೆ ಬಯಸಿದ್ದರಿಂದ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಘವೇಂದ್ರ ಹಿಟ್ನಾಳ್ ಆಯ್ಕೆಯಾಗಿದ್ದರಿಂದ ಮತ್ತೆ ಹಿಟ್ನಾಳ್ ಕುಟುಂಬದಿಂದ ಸಂಗಣ್ಣ ಕರಡಿ ಸೋಲಿನ ರುಚಿ ಅನುಭವಿಸಬೇಕಾಯಿತು. 2018 ರಲ್ಲಿ ಕೆ. ರಾಘವೇಂದ್ರ ಹಿಟ್ನಾಳ್ ಅವರೇ ಮರು ಆಯ್ಕೆಯಾಗುವ ಮೂಲಕ ತಮ್ಮ ತಂದೆ ಕೆ.ಬಸವರಾಜ ಹಿಟ್ನಾಳ್ ಅವರಿಗೆ ಸೋಲಿನ ರುಚಿ ಉಣಿಸಿದ್ದ ಸಂಗಣ್ಣ ಕರಡಿ ಕುಟುಂಬಕ್ಕೆ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು.
2023 ರಲ್ಲಿ ತ್ರಿಕೋನ ಸ್ಪರ್ಧೆ:2023 ರ ಚುನಾವಣೆಯಲ್ಲಿ ಮತ್ತೆ ಕರಡಿ ಹಾಗೂ ಹಿಟ್ನಾಳ್ ಕುಟುಂಬಗಳು ಮುಖಾಮುಖಿಯಾಗಿವೆ. ಆದರೂ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪ್ರಸ್ತುತ ಕೊಪ್ಪಳ ಲೋಕಸಭಾ ಸದಸ್ಯರಾಗಿರುವ ಸಂಗಣ್ಣ ಕರಡಿ ಅವರ ಹಿರಿಯ ಸೊಸೆ ಮಂಜುಳಾ ಅಮರೇಶ ಕರಡಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಹಿಟ್ನಾಳ ಕುಟುಂಬದ ಹಾಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಬಿ. ಫಾರಂನಿಂದ ವಂಚಿತವಾಗಿರುವ ಸಿ.ವಿ. ಚಂದ್ರಶೇಖರ್ಗೆ ಮತ್ತೆ ಬಿಜೆಪಿ ಕೈಕೊಟ್ಟಿದ್ದರಿಂದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೊಪ್ಪಳ ಶಾಸಕನಾಗಬೇಕೆಂಬ ಆಸೆಯಿಂದ ಸಿವಿಸಿ ಅವರು ಕ್ಷೇತ್ರದ ತುಂಬೆಲ್ಲಾ ಓಡಾಡಿ ಜನರಿಗೆ ಹತ್ತಿರವಾಗಿದ್ದಾರೆ. ಹೀಗಾಗಿ ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ ಫಿಕ್ಸ್ ಆದಂತಾಗಿದೆ.
ಮತದಾರರ ಮಾಹಿತಿ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2,50,704 ಒಟ್ಟು ಮತದಾರರಿದ್ದು, 1,24,444 ಪುರುಷ ಮತದಾರರಿದ್ದಾರೆ. 1,26,248 ಮಹಿಳಾ ಮತದಾರರಿದ್ದಾರೆ. ಇತರೆ 12 ಮತದಾರರಿದ್ದಾರೆ. ಕೊಪ್ಪಳದಲ್ಲಿ ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿವರ ಕ್ಷೇತ್ರದ ತುಂಬೆಲ್ಲ ಒಂದೊಂದು ಭಾಗದಲ್ಲಿ ಮತದಾರರು ಭಿನ್ನ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಕೈ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರೆ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿಯಾಗಿಲ್ಲ ಎಂಬ ಅಭಿಪ್ರಾಯ ಕೂಡ ಇದೆ. ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಇನ್ನೂ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾ ಕೇಂದ್ರವೂ ಇನ್ನೂ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಇನ್ನು ಬಿಜೆಪಿ ಮೋದಿ ಹೆಸರೇಳಿಕೊಂಡು ಓಟು ಕೇಳಲು ಮುಂದಾಗಿದೆ. ಸಿ.ವಿ. ಚಂದ್ರಶೇಖರ ಬಿಜೆಪಿ ನನಗೆ ಅನ್ಯಾಯ ಮಾಡಿದೆ. ಕೊಪ್ಪಳಕ್ಕೆ ಹೊಸ ನಾಯಕನಾಗುವೆ ಎಂದು ಕ್ಷೇತ್ರದ ಜನರಲ್ಲಿ ಹೊಸ ಕನಸು ಬಿತ್ತಿ ಮತ ಕೇಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಇಲ್ಲಿ ವಲಸಿಗರಿಗೆ ತಾಂಬೂಲ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ