ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಮಸಾರಿ ಕ್ಯಾಂಪ್ ಬಳಿ ತುಂಗಭದ್ರಾ ಎಡದಂಡೆ ನಾಲೆಗೆ ಬಿದ್ದಿದ್ದ ರಂಧ್ರವನ್ನು ಮುಚ್ಚುವ ಕಾರ್ಯ ಪ್ರಾರಂಭವಾಗಿದೆ.
ತುಂಗಭದ್ರಾ ಎಡದಂಡೆ ನಾಲೆಗೆ ಬಿದ್ದಿದ್ದ ರಂಧ್ರ ಮುಚ್ಚುವ ಕಾರ್ಯ ಪ್ರಾರಂಭ..
ಮಸಾರಿ ಕ್ಯಾಂಪ್ ಬಳಿಯ ಎಡದಂಡೆ ಕಾಲುವೆಯಲ್ಲಿ ಬಿದ್ದಿದ್ದ ರಂಧ್ರವನ್ನು ಮುಚ್ಚುವ ಕಾರ್ಯವನ್ನು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಮುಂದೆ ನಿಂತು ಮಾಡಿಸುತ್ತಿದ್ದಾರೆ.
ಮಸಾರಿ ಕ್ಯಾಂಪ್ ಬಳಿಯ ಎಡದಂಡೆ ಕಾಲುವೆಯಲ್ಲಿ ನಿನ್ನೆ ಸುಮಾರು 10ಕ್ಕೂ ಹಚ್ಚು ಕಡೆ ರಂಧ್ರ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಅಷ್ಟೇ ಅಲ್ಲ, ಪಕ್ಕದಲ್ಲೇ ಇದ್ದ ಸೇತುವೆ ಕುಸಿಯುವ ಭೀತಿಯನ್ನೂ ಮೂಡಿಸಿತ್ತು. ಇದು ಮಸಾರಿ ಕ್ಯಾಂಪ್ ಹಾಗೂ ಕೇಸಕ್ಕಿ ಹಂಚಿನಾಳ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.
ಘಟನೆ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ತುಂಗಭದ್ರಾ ಜಲಾಶಯದ ಮುನಿರಾಬಾದ್ ವೃತ್ತದ ಮುಖ್ಯ ಎಂಜಿನಿಯರ್ ಮಂಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಲುವೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿರುವುದರಿಂದ ದುರಸ್ಥಿ ಕಾಮಗಾರಿ ಮಾಡುವುದಕ್ಕೆ ವಿಳಂಬ ಮಾಡಲಾಯಿತು. ಕಾಲುವೆಯ ನೀರು ಸಂಪೂರ್ಣ ಖಾಲಿಯಾಗುವುದಕ್ಕೆ ಸುಮಾರು 10 ರಿಂದ 12 ಗಂಟೆ ಕಾಲಾವಕಾಶ ಬೇಕಾಗಿತ್ತು. ಇದೀಗ ಕಾಲುವೆಯಲ್ಲಿ ಸಂಪೂರ್ಣ ನೀರು ಖಾಲಿಯಾದ ಕಾರಣ ಇಂದು ಬೆಳಗ್ಗೆಯಿಂದ ದುರಸ್ತಿ ಕೆಲಸ ಭರದಿಂದ ಸಾಗಿದೆ. ಮೂರು ಜೆಸಿಬಿಗಳು ನಿರಂತರ ಕಾರ್ಯನಿರ್ವಹಿಸುತ್ತಿದ್ದು, ತುಂಗಭದ್ರಾ ಜಲಾಶಯದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕಾಲುವೆಗೆ ಬಿದ್ದಿದ್ದ ಬೋಂಗಾ ಮುಚ್ಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.