ಕುಷ್ಟಗಿ(ಕೊಪ್ಪಳ):ಚಕ್ರ ತಿರುಗಿಸಿ, ಸಾಣೆ ಹಿಡಿದು ಮನೆ ಬಳಕೆಯ ಈಳಿಗೆ, ಕುಡಗೋಲು, ಕತ್ತರಿ, ಚಾಕು ಇತ್ಯಾದಿ ವಸ್ತುಗಳನ್ನು ಮೊನಚುಗೊಳಿಸಿದರೆ ಆದಾಯ ಗಿಟ್ಟಿಸುವ ಬದುಕು ಸಾಣೆ ಕಲ್ಲಿನಂತೆ ಸವೆಯುತ್ತದೆ. ಆದಾಗಿಯೂ, ತಮ್ಮ ಕಸುಬುದಾರಿಕೆ ನಿಲ್ಲಿಸಿಲ್ಲ.
ಕುಷ್ಟಗಿ ತಾಲೂಕಿನ ತಾವರಗೇರಾದ ರಾಜೇಸಾಬ್ ಕಂತ್ರಾಜ್ ಕಳೆದ 15 ವರ್ಷಗಳಿಂದ ಸಾಣೆ ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಮೊದಲು ಹೆಗಲ ಮೇಲೆ ಹೊತ್ತೊಯ್ದು ಸಾಣೆ ಹಿಡಿಯುತ್ತಿದ್ದವರು ಇದೀಗ ಕ್ರಮೇಣ ಟಿವಿಎಸ್ ಎಕ್ಸೆಲ್ ವಾಹನದಲ್ಲಿ ಸಾಣೆಗಾರಿಕೆಯನ್ನು ನಿರ್ವಹಿಸುವ ಮಟ್ಟಿಗೆ ಬದುಕು ಬದಲಿಸಿಕೊಂಡಿದ್ದಾರೆ. ನಿತ್ಯ ಟಿವಿಎಸ್ ವಾಹನದ ಸಾಣೆ ಚಕ್ರ ಹೊತೊಯ್ದು ಸೇವೆ ನೀಡುತ್ತಿದ್ದಾರೆ. ಈ ಕಾರ್ಯ ನಿರ್ವಹಿಸಿದರೆ ದಿನಕ್ಕೆ 500 ರಿಂದ 600 ರೂ. ಆದಾಯದಲ್ಲಿ ಜೀವನ ಸಂತೃಪ್ತಿ ಅವರದ್ದಾಗಿದೆ.