ಕುಷ್ಟಗಿ(ಕೊಪ್ಪಳ): ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜೂನ್ ತಿಂಗಳ ಆರಂಭದಿಂದ ಬೇವಿನ ಬೀಜಗಳ ವ್ಯಾಪಾರ ವಹಿವಾಟು ಶುರುವಾಗಿದೆ. ರೈತರು ಸಂಗ್ರಹಿಸಿದ ಬೇವಿನ ಬೀಜಗಳನ್ನು ಮೂಟೆಗಳಲ್ಲಿ, ಗೂಡ್ಸ್ ವಾಹನಗಳಲ್ಲಿ ಎಪಿಎಂಸಿ ಮಾರುಕಟ್ಟೆಗೆ ತರುತ್ತಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ರೈತನ ಪಾಲಿಗೆ ಸಿಹಿಯಾದ ಬೇವಿನ ಬೀಜ
ಉತ್ತರ ಕರ್ನಾಟಕದಲ್ಲಿ ಅತ್ಯಧಿಕವಾಗಿ ಬೇವಿನ ಬೀಜ ವ್ಯಾಪಾರವಹಿವಾಟು ನಡೆಯುವ ಕೇಂದ್ರವಾದ ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜೂನ್ ತಿಂಗಳ ಆರಂಭದಿಂದ ಬೇವಿನ ಬೀಜಗಳ ವ್ಯಾಪಾರ ವಹಿವಾಟು ಶುರುವಾಗಿದೆ.
ಉತ್ತರ ಕರ್ನಾಟಕದಲ್ಲಿ ಇದು ಅತ್ಯಧಿಕವಾಗಿ ಬೇವಿನ ಬೀಜ ವ್ಯಾಪಾರವಹಿವಾಟು ನಡೆಯುವ ಕೇಂದ್ರವಾಗಿದ್ದು, ಕಳೆದ ಮೂರು ವಾರಗಳಲ್ಲಿ 14,033 ಕ್ವಿಂಟಾಲ್ ಬೇವಿನ ಬೀಜ ಆವಕವಾಗಿದ್ದು, ಪ್ರತಿ ಕ್ವಿಂಟಲ್ಗೆ ಬೇವಿನ ಬೀಜದ ಗುಣಮಟ್ಟ ಆಧರಿಸಿ, 600 ರೂ. ದಿಂದ 800 ರೂ. ವರೆಗೆ ಸರಾಸರಿ ದರವಿದ್ದು, ಕಳೆದ ಜೂನ್ 2019 ರಲ್ಲಿ 17,022 ಆವಕವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ನೀಲೇಶ ಶೆಟ್ಟಿ ಮಾಹಿತಿ ನೀಡಿದರು.
ಬೇವಿನ ಬೀಜದ ವರ್ತಕರಾದ ಗೂಳಪ್ಪ ಶಿವಶೆಟ್ಟರ್ ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಹಾವಳಿಯಲ್ಲೂ ಬೇವಿನ ಬೀಜಕ್ಕೆ ಬೇಡಿಕೆ ಇದೆ. ಇದರ ವಹಿವಾಟಿಗೆ ಯಾವುದೇ ಪರಿಣಾಮ ಬೀರಿಲ್ಲ. ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳ ಹಾಗೂ ಮಲೆನಾಡಿನ ಭಾಗದ ಖರೀದಿದಾರರು, ಮೊಬೈಲ್ ಮೂಲಕ ಸಂಪರ್ಕಿಸಿ ಬೇವಿನ ಬೀಜಗಳನ್ನು ಖರೀದಿಸುತ್ತಿದ್ದಾರೆ. ಈ ವೇಳೆಗೆ ಮಳೆಯಾಗಿದ್ದರೆ ರೈತರು ಬೇವಿನ ಬೀಜ ಆರಿಸುವ ಪ್ರಮಾಣ ಕಡಿಮೆಯಾಗಿರುತ್ತಿತ್ತು. ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಕೂಲಿಕಾರರಿಗೆ ಪರ್ಯಾಯ ಉದ್ಯೋಗವಾಗಿದೆ. 20 ಲೀಟರ್ ಪ್ರಮಾಣದ ಡಬ್ಬಿಯ, 6 ಡಬ್ಬಿಯನ್ನು 1 ಚೀಲದಂತೆ ರೈತರು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು.