ಸೋನಿಯಾ ಗಾಂಧಿ ವಿಷಕನ್ಯೆ ಏನು?... ಖರ್ಗೆ ಹೇಳಿಕೆ ಬಗ್ಗೆ ಯತ್ನಾಳ್ ಪ್ರಶ್ನೆ ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂದು ಹೇಳಿದ್ದೀರಿ. ಹಾಗಾದರೆ, ಕಾಂಗ್ರೆಸ್ ನಾಯಕಿ ಸೋನಿಯಾ ವಿಷಕನ್ಯೆ ಏನು?. ಮೋದಿ ಅವರ ಬಗ್ಗೆ ಹೀಗೆ ಮಾತನಾಡಿಯೇ ಮಲ್ಲಿಕಾರ್ಜುನ ಖರ್ಗೆ ಅವರು ಗುಲಬರ್ಗಾ ಚುನಾವಣೆಯಲ್ಲಿ ಔಟಾದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು. ಯಲಬುರ್ಗಾ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ ಪರವಾಗಿ ಪ್ರಚಾರ ಸಭೆಯಲ್ಲಿ ಗುರುವಾರ ಸಂಜೆ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ಹಾವಿಗೆ ಹೋಲಿಕೆ ಮಾಡಿದ್ದಾರೆ. ಖರ್ಗೆ ಹಿರಿಯರು. ಅವರ ಬಗ್ಗೆ ಗೌರವ ಇದೆ. ಒಬ್ಬ ದೇಶದ ಪ್ರಧಾನಿ ಬಗ್ಗೆ ಖರ್ಗೆ ಹೇಗೆ ಮತನಾಡಿದರು ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ
ಪ್ರಧಾನಿ ಮೋದಿ ಅವರನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಮೆರಿಕ ಒಂದು ಕಾಲದಲ್ಲಿ ವೀಸಾ ಕೊಟ್ಟಿರಲಿಲ್ಲ. ಇವತ್ತು ಮೋದಿ ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೋಗುವಂತ ವಿಶ್ವದ ನಾಯಕರಾಗಿ ಬೆಳೆದಿದ್ದಾರೆ. ದೇಶ ಹಾಳು ಮಾಡಿದಂತಹ, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ ಆಗಿ ಸೋನಿಯಾ ಗಾಂಧಿ ಕೆಲಸ ಮಾಡಿದ್ದಾರೆ. ಮಣಿಶಂಕರ್ ಅಯ್ಯರ್ ಚೀನಾ ಮತ್ತು ಪಾಕಿಸ್ತಾನದ ನೆರವು ಬೇಡಿ, ಮೋದಿ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂದು ಹೇಳಿದ್ದರು. ಇಂತಹ ಕಾಂಗ್ರೆಸ್ ಇವತ್ತು ವಿರೋಧ ಪಕ್ಷಕ್ಕೂ ಅರ್ಹತೆ ಇಲ್ಲ. ಖರ್ಗೆ ತಮ್ಮ ಹೇಳಿಕೆಯಿಂದ ದೇಶದ ಪ್ರಧಾನ ಮಂತ್ರಿಗೆ ಅಪಮಾನ ಮಾಡಿದ್ಧಾರೆ. ಇದನ್ನು ಹಗುರವಾಗಿ ತಿಳಿದುಕೊಳ್ಳಬಾರದು ಎಂದು ಹೇಳಿದರು.
ಲಿಂಗಾಯತ ಸಿಎಂ ಬಗ್ಗೆ ಕಾಂಗ್ರೆಸ್ ಘೋಷಣೆ ಮಾಡಲಿ:ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೂಡ ವಾಗ್ದಾಳಿ ನಡೆಸಿದ ಯತ್ನಾಳ್, ಲಿಂಗಾಯತರು ಭ್ರಷ್ಟ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರೇ ನೀವು ವೈಯಕ್ತಿಕವಾಗಿ ಟೀಕೆ ಮಾಡಿ ನಾವು ಸಹಿಸಿಕೊಳ್ಳುತ್ತೇವೆ. ಅದರ ಬದಲು ನೀವು ಇಡೀ ಸಮಾಜವನ್ನು ಬೈಯುತ್ತಿದ್ದೀರಿ, ಇದು ಸರಿಯಲ್ಲ. ಕಾಂಗ್ರೆಸ್ನವರಿಗೆ ತಾಕತ್ ಇದ್ದರೆ, ಧಮ್ ಇದ್ದರೆ ಲಿಂಗಾಯಿತರೇ ಮುಂದಿನ ಸಿಎಂ ಎಂದು ಘೋಷಣೆ ಮಾಡಿ ಎಂದು ಸವಾಲು ಹಾಕಿದರು.
ರಾಯರಡ್ಡಿ ಮೆದುಳು, ಹೃದಯಕ್ಕೆ ಕನೆಕ್ಷನ್ ಇಲ್ಲ:ಯಲಬುರ್ಗಾ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಟೀಕೆ ಮಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಲಬುರ್ಗಾಕ್ಕೆ ಕೃಷ್ಣಾ ಬಿ ಸ್ಕೀಂನಿಂದ ನೀರುವ ತರುವ ಯೋಜನೆಗೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಇದು ಅಡಿಗಲ್ಲು ಅಲ್ಲ, ಅಡ್ಡಗಾಲು ಎಂದಿದ್ದರು. ಪಂಚಮಸಾಲಿಗಳಿಗೆ ಮೀಸಲಾತಿ ಸಿಗಲ್ಲ ಎಂದಿದ್ದರು. ಇವೆಲ್ಲ ನೋಡಿದರೆ ಅವರ ಮೆದುಳಿಗೂ, ಹೃದಯಕ್ಕೂ ಸಂಬಂಧವೇ ಇಲ್ಲ ಎಂಬುದು ತಿಳಿಯುತ್ತದೆ ಎಂದು ಲೇವಡಿ ಮಾಡಿದರು.
ಬುಲ್ಡೋಜರ್ ಸೌಂಡ್ ಆಗುತ್ತವೆ:ದೇಶದ ಮೂಲೆ ಮೂಲೆಯಲ್ಲಿ ನಾವು ಗಣಪತಿ, ಡಿಜೆ ಹಚ್ಚೋರೆ ಯಾರ ಪರ್ಮಿಷನ್ ಬೇಕಿಲ್ಲ ನಮಗೆ. ಹಾಗೊಂದು ವೇಳೆ ಹಿಂದೂಗಳ ಮೇಲೆ ಕಲ್ಲು ಬಿದ್ದರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಬುಲ್ಡೋಜರ್ ಬಿಡುತ್ತೇವೆ. ನಮ್ಮಲ್ಲೂ ಬುಲ್ಡೋಜರ್ ಸೌಂಡ್ ಮಾಡಲಿವೆ ಎಂದು ಯತ್ನಾಳ ಹೇಳಿದರು.
ಇದನ್ನೂ ಓದಿ:"ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ": ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು