ಕೊಪ್ಪಳ: ಸಿದ್ದರಾಮಯ್ಯ ಅವರ ಸ್ವಾರ್ಥ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷ ನಮಗೆ ಮೋಸ ಮಾಡಿದ್ದರಿಂದ ನಾವು ಆ ಪಕ್ಷವನ್ನು ತೊರೆದೆವು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ರಾಕೇಶ್, ಸೂಪರ್ ಸಿಎಂ ಹಾಗೂ ಕೆಂಪಯ್ಯ, ಗೃಹ ಸಚಿವ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದರಂತೆ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಆರೋಪಿಸಲಾಗುತ್ತಿದೆ. ಸಿದ್ದರಾಮಯ್ಯ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ಕಾರಣಕ್ಕೆ ಇಂತಹ ಆರೋಪ ಮಾಡುತ್ತಾರೆ ಎಂದರು.
ಚುನಾವಣೆ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರು ದುಡಿದಿರುತ್ತಾರೆ. ಹೀಗಾಗಿ ಕೆಲವೊಂದು ಸಲಹೆ ಸೂಚನೆ ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ನಮ್ಮ ಪರವಾಗಿ ಕುಟುಂಬದವರು ಆಡಳಿತ ನಡೆಸುತ್ತಾರೆ ಎಂದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಲಹೆ ನೀಡಬಹುದು ಎಂದರು.