ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆಯ ನಂತರವೂ ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ: ಸಚಿವ ಶಿವರಾಜ ತಂಗಡಗಿ

ಕಾಂಗ್ರೆಸ್ ಸರ್ಕಾರದ​ ಪಂಚ ಗ್ಯಾರಂಟಿ ಯೋಜನೆಗಳನ್ನು 5 ವರ್ಷಗಳವರೆಗೂ ಜನರಿಗೆ ತಲುಪಿಸುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ ತಂಗಡಗಿ

By ETV Bharat Karnataka Team

Published : Aug 30, 2023, 5:12 PM IST

Updated : Aug 30, 2023, 5:54 PM IST

ಸಚಿವ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ: "ಕೆಲವರು ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಐದು ವರ್ಷವೂ ಅಧಿಕಾರದಲ್ಲಿರುತ್ತೇವೆ. ಈ ಐದು ವರ್ಷಗಳ ಕಾಲವೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತೇವೆ" ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು. ಕೊಪ್ಪಳದಲ್ಲಿಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. "ಗ್ಯಾರಂಟಿ ಯೋಜನೆಯ ನಂತರ ಅಭಿವೃದ್ದಿಗೆ ಹಣವಿಲ್ಲ ಎನ್ನುತ್ತಿದ್ದಾರೆ. ನಾವು ಅಭಿವೃದ್ದಿಗೂ ಹಣ ನೀಡುತ್ತೇವೆ" ಎಂದು ತಿಳಿಸಿದರು.

"ನಾವು 100 ದಿನದಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಗ್ಯಾರಂಟಿಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎಂದಿದ್ದರು. ಆದರೆ, ನುಡಿದಂತೆ ನಡೆದ ಸರಕಾರ ನಮ್ಮ ಸಿದ್ದರಾಮಯ್ಯ ಸರಕಾರ. ಕೊಪ್ಪಳ ಜಿಲ್ಲೆಯಲ್ಲಿ 2.78 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ. ವರ್ಷಕ್ಕೆ 645 ಕೋಟಿ ರೂಪಾಯಿ ಈ ಯೋಜನೆಗಾಗಿ ಮೀಸಲಿಡಲಾಗಿದೆ. ಇದರಿಂದಾಗಿ ರಾಜ್ಯದ ಬಡ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸಾಧ್ಯವಾಗಲಿದೆ" ಎಂದರು.

"ಕಾಂಗ್ರೆಸ್ ಸರಕಾರ ದಿವಾಳಿಯಾಗಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಬಡವರಿಗೆ ದುಡ್ಡು ಕೊಟ್ಟರೆ ರಾಜ್ಯ ದಿವಾಳಿಯಾಗುವುದಿಲ್ಲ. ದೇಶದಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿ ದೇಶ ಬಿಟ್ಟು ಹೋದರಲ್ಲ, ಅವರಿಂದ ದೇಶ ದಿವಾಳಿಯಾಗಲಿದೆ. ಬಡವರಿಗೆ ಅಕ್ಕಿ ಕೊಡಲು ಕೇಂದ್ರ ಸರಕಾರ ನಿರಾಕರಿಸಿತು. ಕೇಂದ್ರದ ಹತ್ತಿರ ದಾಸ್ತಾನಿದ್ದರೂ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು. ಆದರೆ, ಯಾರು ಏನೇ ವಿರೋಧ ಮಾಡಲಿ, ಕಾಂಗ್ರೆಸ್ ಬಡವರ ಕಣ್ಣೀರೊರೆಸುವ ಕೆಲಸ ಮಾಡಲಿದೆ" ಎಂದು ಹೇಳಿದರು.

"ಅಗಸ್ಟ್‌ ತಿಂಗಳಲ್ಲಿ ರಾಜ್ಯಾದ್ಯಂತ ನಿರೀಕ್ಷಿತ ಮಳೆ ಆಗಿಲ್ಲ. ಇದರಿಂದಾಗಿ ಅನ್ನದಾತರು ಆತಂಕಕ್ಕಿಡಾಗಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಎದೆಗುಂದುವುದು ಬೇಡ. ಈಗಾಗಲೇ ಎಲ್ಲ ಜಿಲ್ಲೆಯಲ್ಲಿಯೂ ಸಮೀಕ್ಷೆ ಪ್ರಗತಿಯಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಬರಘೋಷಣೆ ಮಾಡಿ ರೈತರಿಗೆ ಅನುಕೂಲ ಮಾಡುತ್ತೇವೆ" ಎಂದು ಭರವಸೆ ಕೊಟ್ಟರು.

ಕಾಂಗ್ರೆಸ್​ನ ಗ್ಯಾರಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನಗೆ ಮೈಸೂರಿನಲ್ಲಿಂದು ಕಾಂಗ್ರೆಸ್​ ಮಾಜಿ ಅಧ್ಯಕ್ಷ, ಸಂಸದ ರಾಹುಲ್​ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಚಾಲನೆ ನೀಡಿದರು. ಈ ಯೋಜನೆಯಡಿ ಮನೆಯೆ ಯಜಮಾನಿಗೆ 2000 ರೂ ನೀಡಲಾಗುತ್ತದೆ.

ಇದನ್ನೂ ಓದಿ:ಗೃಹಲಕ್ಷ್ಮಿಗೆ ನಮ್ಮ ವಿರೋಧವಿಲ್ಲ, ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರದ ಗಮನವಿರಲಿ: ಎನ್.ರವಿಕುಮಾರ್

Last Updated : Aug 30, 2023, 5:54 PM IST

ABOUT THE AUTHOR

...view details