ಗಂಗಾವತಿ(ಕೊಪ್ಪಳ):ತಾಲೂಕಿನಲ್ಲಿ ಪೋಕ್ಸೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ಆಸ್ಪತ್ರೆಗೆ ಬಂದ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಯಿಂದ ಇನ್ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದು ಸಲುಗೆ ಬೆಳೆಸಿಕೊಂಡಿದ್ದಾನೆ. ದಿನ ಕಳೆದಂತೆ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ:ತಾಲ್ಲೂಕಿನ ಗ್ರಾಮವೊಂದರ ಬಾಲಕಿ ನೀಡಿದ ದೂರಿನ ಮೇರೆಗೆ ಇಲ್ಲಿನ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮುಸ್ತಾಪ ವಡ್ಡರಹಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತ ನಗರದ ಪ್ರತಿಷ್ಠಿತ ಕಾಲೇಜುವೊಂದರ ವಿದ್ಯಾರ್ಥಿಯಾಗಿದ್ದು, ಶಿಕ್ಷಣದ ಭಾಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿಗೆ ನಿಯೋಜನೆಗೊಂಡಿದ್ದನು.
ನಿತ್ಯವೂ ಲೈಂಗಿಕ ಕಿರುಕುಳ: ಅನಾರೋಗ್ಯ ಪೀಡಿತ ತಂದೆಯನ್ನು ನಾಲ್ಕು ತಿಂಗಳ ಹಿಂದೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಾಲಕಿ ದಾಖಲು ಮಾಡಿದ್ದಳು. ಚಿಕಿತ್ಸೆ ನೀಡುವ ನೆಪದಲ್ಲಿ ಮುಸ್ತಾಫ ಎಂಬಾತ ಬಾಲಕಿಯನ್ನು ಪರಿಚಯಿಸಿಕೊಂಡು ಸಲುಗೆ ಬೆಳೆಸಿದ್ದನು ಎನ್ನಲಾಗಿದೆ. ಬಳಿಕ ಆಕೆಯಿಂದ ಇನ್ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದುಕೊಂಡಿದ್ದನು. ಬಳಿಕ ಇಬ್ಬರು ಕಳೆದ ನಾಲ್ಕು ತಿಂಗಳಿಂದ ಚಾಟಿಂಗ್ ಮಾಡುತ್ತಿದ್ದರು. ನಾನು ನಿನ್ನನ್ನು ಗಾಢವಾಗಿ ಪ್ರೀತಿಸುತಿದ್ದೇನೆ ಎಂದು ಮುಸ್ತಾಫ ಬಾಲಕಿಯನ್ನು ನಂಬಿಸಿದ್ದಾನೆ. ಬಳಿಕ ನಿತ್ಯವೂ ಮಧ್ಯರಾತ್ರಿ ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸಿದ್ದಾನೆ.