ಕುಷ್ಟಗಿ (ಕೊಪ್ಪಳ): ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ಜೇನರ್ ಅವರ ತವರು ಗ್ರಾಮದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ನೀರಿನ ಘಟಕ ನೀರಿನ ಅಭಾವದ ಹಿನ್ನೆಲೆಯಲ್ಲಿ ನಿರುಪಯುಕ್ತವಾಗಿದೆ.
ಟೆಂಗುಂಟಿ ಗ್ರಾಮದ ಹಳ್ಳದ ಸೇತುವೆ ಬಳಿ, 2014-15ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃಧ್ಧಿ ಯೋಜನೆಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದ್ದು, ಇನ್ನೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಎಸ್ಸಿ ಕಾಲೋನಿಯಲ್ಲಿ ಘಟಕದ ಕಟ್ಟಡ ಮಾತ್ರವಿದೆ. ಇನ್ನು ಇಲ್ಲಿಯವರೆಗೂ ಕುಷ್ಟಗಿ ಪಟ್ಟಣದ ಹೊರವಲಯದ ಕೊಳವೆ ಬಾವಿಯ ಮೂಲಕ ಪೂರೈಸಿದ ನೀರನ್ನೇ ನೇರವಾಗಿ ಬಳಸುವಂತಾಗಿದೆ.
ಶುದ್ಧ ನೀರಿನ ಘಟಕಗಳಿಗೆ ನೀರಿನ ಅಭಾವ ಈ ಭಾಗದಲ್ಲಿ ಕೊಳವೆ ಬಾವಿಗಳ ನೀರು ಕ್ಷಾರಯುಕ್ತವಾಗಿದ್ದು, ಕುಡಿಯುವುದಕ್ಕೂ ಯೋಗ್ಯವಾಗಿಲ್ಲ. ಈ ನೀರನ್ನು ಶುದ್ಧ ಘಟಕಗಳ ಮೂಲಕ ಶುದ್ಧೀಕರಿಸಿದರೆ, ಶೇ.25ರಷ್ಟು ನೀರು ಮಾತ್ರ ಸಿಗುತ್ತಿದೆ. ಈ ಕಾರಣದಿಂದ ಶುದ್ಧ ನೀರಿನ ಘಟಕಗಳಿದ್ದರೂ, ಶುದ್ಧ ನೀರು ನಾಮಫಲಕಕ್ಕೆ ಸೀಮಿತವಾಗಿದೆ.
ಇನ್ನು ಗ್ರಾಮದ ವಕೀಲರಾದ ಪರಶುರಾಮ್ ಆಡಿನ್ ಪ್ರತಿಕ್ರಿಯಿಸಿ, ಟೆಂಗುಂಟಿ ಗ್ರಾಮಕ್ಕೆ ನೀರಿನ ತೊಂದರೆ ಆಗಾಗ್ಗೆ ಎದುರಿಸುವಂತಾಗಿದೆ. ಶಾಶ್ವತ ಪರಿಹಾರವಾಗಿ ಕುಷ್ಟಗಿ ಮೂಲಕ ಹಾದು ಹೋಗಿರುವ ಜಿಂದಾಲ್ ಬೃಹತ್ ಪೈಪಲೈನ್ನಿಂದ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿಕೊಟ್ಟರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.