ಕರ್ನಾಟಕ

karnataka

ETV Bharat / state

ಕೊಪ್ಪಳ ಜಿಲ್ಲೆಯ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಾಹ: ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ

ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆಯ ಧಗೆ ಆರಂಭವಾಗಿದೆ. ಸುಡು ಬಿಸಿಲಿನಿಂದಾಗಿ ನೆಲ ಕಾದ ತಗಡಿನಂತಾಗುತ್ತಿದೆ. ಬೇಸಿಗೆ ಆರಂಭದಲ್ಲಿಯೇ ಇಂತಹ ವಾತವರಣ ನಿರ್ಮಾಣ ಆಗುತ್ತಿರುವುದರಿಂದ ಜನರ ಜಲದಾಹ ತೀವ್ರವಾಗುತ್ತಿದೆ.

Water problem at koppal
ಕೊಪ್ಪಳ: 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಾಹ

By

Published : Mar 6, 2021, 9:26 AM IST

Updated : Mar 6, 2021, 9:50 AM IST

ಕೊಪ್ಪಳ: ಬೇಸಿಗೆ ಆರಂಭದಲ್ಲಿಯೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಅಧಿಕೃತ ಅಂದಾಜಿನ ಪ್ರಕಾರ ಬರೋಬ್ಬರಿ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ಬೇಸಿಗೆಯ ಆರಂಭದಲ್ಲಿಯೇ 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಾಹ...

ಹೌದು, ಬಿರುಬಿಸಿಲಿನ ನಾಡು ಎಂದು ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆಯ ಧಗೆ ಆರಂಭವಾಗಿದೆ. ಸುಡು ಬಿಸಿಲಿನಿಂದಾಗಿ ನೆಲ ಕಾದ ಹೆಂಚಿನಂತಾಗಿದೆ. ಬೇಸಿಗೆ ಆರಂಭದಲ್ಲಿಯೇ ಇಂತಹ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಜನರ ಜಲದಾಹ ತೀವ್ರವಾಗುತ್ತಿದೆ.

ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸಾರ್ವಜನಿಕ ನಲ್ಲಿಗಳ ಮುಂದೆ ನೂರಾರು ಖಾಲಿ ‌ಕೊಡಗಳ ಸಾಲುಗಳು ಕಾಣುತ್ತಿವೆ. ತಮ್ಮ ಪಾಳಿ ಯಾವಾಗ ಬರುತ್ತೆ ಎಂದು ನಲ್ಲಿಯ ಮುಂದೆ ಕುಳಿತು ಖಾಲಿ‌ ಕೊಡಗಳು ಜಪ ಮಾಡುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.

ಕೆಲ ಗ್ರಾಮಗಳಲ್ಲಿ ಬೋರ್​ವೆಲ್​ಗಳ ಸರಿಯಾದ ನಿರ್ವಹಣೆ ಇಲ್ಲದೆ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಕೊಪ್ಪಳ ತಾಲೂಕಿನ ಬಹದ್ದೂರಬಂಡಿ, ಬಿ. ಹೊಸಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವರ್ಷಪೂರ್ತಿ ಜೀವಂತವಾಗಿದೆ. ಅಲ್ಲದೇ ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕುಡಿಯುವ ನೀರಿನ ಅಭಾವ ಉಂಟಾಗಿದೆ.

ಬಿ.ಹೊಸಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸಲು 4 ಬೋರ್​ವೆಲ್​ಗಳಿದ್ದರೂ, ಅವುಗಳ ಸರಿಯಾದ ನಿರ್ವಹಣೆ ಕೊರತೆಯಿಂದ ಗ್ರಾಮಸ್ಥರು ನೀರಿಗಾಗಿ ನಿತ್ಯವೂ ಪರದಾಡುತ್ತಿದ್ದಾರೆ. ನೀರು ಬಂದರೆ ಬಂದಿತು, ಇಲ್ಲವೆಂದರೆ ಇಲ್ಲ. ಕುಡಿಯುವ ನೀರು ತರಲೆಂದೇ ಮನೆಯಲ್ಲಿ ಇಬ್ಬರು ಮೀಸಲು ಇರಬೇಕಾದ ಸನ್ನಿವೇಶವಿದೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮ ಪಂಚಾಯತ್ ಸೇರಿ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮಾತ್ರ ಕೊನೆಯಾಗಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 150 ಗ್ರಾಮಗಳಲ್ಲಿ ಕುಡಿಯುವ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪಂಚಾಯತ್​ ಅಂದಾಜಿಸಿದೆ. ಸಮಸ್ಯೆ ಎದುರಾಗಲಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಶಾಸಕರ ಎಸ್​ಡಿಪಿ ಅನುದಾನ, 15 ನೇ ಹಣಕಾಸು ಅನುದಾನ ಹಾಗೂ ಇತರೆ ಅನುದಾನ ಬಳಸಿಕೊಂಡು ಸಮಸ್ಯೆ ಪರಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ‌.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ. ಅವಶ್ಯವಿದ್ದಲ್ಲಿ ಖಾಸಗಿ ಬೋರ್​ವೆಲ್​ಳನ್ನು ವಶಕ್ಕೆ ಪಡೆದು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

Last Updated : Mar 6, 2021, 9:50 AM IST

ABOUT THE AUTHOR

...view details