ಕುಷ್ಟಗಿ : ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರ್ವಿಹಾಳರನ್ನು 1 ಸಾವಿರ ಮತಗಳ ಅಂತರದ ಲೀಡ್‌ನಿಂದ ಗೆಲ್ಲಿಸಿ ಸಾಕು ಎಂದಿದ್ದರು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನೆನಪಿಸಿಕೊಂಡರು.
ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶದ ಹಿನ್ನೆಲೆ, ಭಾನುವಾರ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಏ.17 ರಂದು ಮಸ್ಕಿ ಕ್ಷೇತ್ರದ ಚುನಾವಣೆ ಬಳಿಕ ಕೆಲವೇ ಕ್ಷಣಗಳಲ್ಲಿ ನನ್ನನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಮತಗಳಿಂದ ಗೆಲ್ಲುತ್ತಾರೆ ಎಂದು ವಿಚಾರಿಸಿದ್ದರು.
ಆಗ ನಾನು, ನಮ್ಮ ಅಭ್ಯರ್ಥಿ 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ತೀವಿ ಎಂದು ಹೇಳಿದಾಗ, ಸಿದ್ದರಾಮಯ್ಯ 1 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡು ಎಂದು ವಿಶ್ವಾಸದಿಂದ ಹೇಳಿದ್ದರು. ನಮ್ಮ ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಪ್ರದರ್ಶನದಿಂದ ಈ ಫಲಿತಾಂಶ ಬಂದಿದೆ.
ಈ ಮಸ್ಕಿ ಚುನಾವಣೆ 2023ರ ಚುನಾವಣೆಯ ದಿಕ್ಸೂಚಿ ಎಂದು ಪ್ರತಿ ಪ್ರಚಾರಸಭೆಯಲ್ಲೂ ಹೇಳಿದ್ದೆ. ಮುಂದಿನ 2023ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು.
ಆಪರೇಷನ್ ಕಮಲಕ್ಕೆ ತಿರುಮಂತ್ರ :ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಮಾಡಲು ಮುಂದಾದವರಿಗೆ ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ರೀತಿಯಲ್ಲಿ ಬುದ್ದಿ ಕಲಿಸಿದಾಗಲೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿದೆ. ಆಪರೇಶನ್ ಕಮಲ ಎನ್ನುವ ಸಂಸ್ಕಾರ ಹುಟ್ಟು ಹಾಕಿರುವುದು ಕೆಟ್ಟ ಸಂಸ್ಕೃತಿ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.