ಗಂಗಾವತಿ (ಕೊಪ್ಪಳ): "ಆಂಜನೇಯ ಜನಿಸಿದ ನೆಲದಲ್ಲಿ ಧರ್ಮ ಉಳಿಯಬೇಕು. ಸತ್ಯ ಆಳ್ವಿಕೆ ಮಾಡಬೇಕಾದರೆ ಪ್ರಾಮಾಣಿಕ ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿಗೆ ಮತ್ತೊಮ್ಮೆ ಅವಕಾಶ ನೀಡಬೇಕು" ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಪರೋಕ್ಷವಾಗಿ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿಗೆ ಟಾಂಗ್ ಕೊಟ್ಟರು. ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಆಪ್ತ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕೆಆರ್ಪಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಶ್ರೀರಾಮುಲು ಪ್ರಚಾರ ಕಣಕ್ಕೆ ಧುಮಕಿದ್ದಾರೆ.
ಪರಣ್ಣ ಪರ ಬ್ಯಾಟಿಂಗ್: ಬಿಜೆಪಿ ರಾಜ್ಯದಲ್ಲಿ ಇನ್ನೂ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಆದರೆ ನಗರದಲ್ಲಿ ನಡೆದ ವಿಜಯ ಸಂಕಲ್ಪ ರಥಯಾತ್ರೆಯ ಸಂದರ್ಭದಲ್ಲಿ ಸಚಿವ ಶ್ರೀರಾಮುಲು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಎಂದು ಅಧಿಕೃತ ಘೋಷಣೆ ಮಾಡಿದರು. ಇದು ಟಿಕೆಟ್ ಅಕಾಂಕ್ಷಿಗಳಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಅಸ್ಸಾಂ ಮುಖ್ಯಮಂತ್ರಿ ಆಗಮಿಸಿದ್ದಾರೆ. ಪರಣ್ಣ ಮುನವಳ್ಳಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಲು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಬಂದಿದ್ದಾರೆ. 2023ರಲ್ಲಿ ನಡೆಯುವ ಚುನಾವಣೆಗಿದು ವಿಜಯ ಸಂಕಲ್ಪ ಯಾತ್ರೆಯಾಗಬೇಕು. ಕ್ಷೇತ್ರದಿಂದ ಪರಣ್ಣ ಮುನವಳ್ಳಿ ಗೆಲ್ಲಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಪೈಕಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.