ಗಂಗಾವತಿ (ಕೊಪ್ಪಳ): "ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನೆಲೆಗೆ ಬಂದಿದಿರುವ ಬಗ್ಗೆ ಗಂಗಾವತಿಯುಲ್ಲಿ ಮಾತನಾಡಿದ ಅವರು, "ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ನನ್ನ ಅನಿಸಿಕೆ ಪ್ರಕಾರ ಇನ್ನು 15 ರಿಂದ20 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ" ಎಂದರು.
ನಾವು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಗಾಳನೇ ಇಲ್ಲ. ಮೀನು ಹೇಗೆ ಬೀಳುತ್ತದೆ. ಬಿಜೆಪಿಯವರು ಆಪರೇಷನ್ ಮಾಡಿಯೇ ಆಡಳಿತ ನಡೆಸಿದ್ದಾರೆ. ಮೊನ್ನೆ ಆಪರೇಷನ್ ಮಾಡಿ ಕತ್ತರಿಯನ್ನು ಹೊಟ್ಟೆಯಲ್ಲಿ ಇಟ್ಟು ಹೊಲಿಗೆ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು. ನಾವು ಯಾವುದೇ ಆಪರೇಷನ್ ಮಾಡೋದಿಲ್ಲ. ಅವರು ನಮ್ಮ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರಬಹುದು" ಎಂದು ಆಹ್ವಾನಿಸಿದರು.
"ನಾವು 136 ಮಂದಿ ಇದ್ದೇವೆ. ನಮಗೆ ಶಾಸಕರ ಕೊರತೆ ಇಲ್ಲ. ಅವರು ನಮ್ಮ ತತ್ವ ಸಿದ್ಧಾಂತ ಮತ್ತು ನಾವು ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದಿದ್ದೆವು, ಅದರಂತೆ ಈಗಾಗಲೇ ಮೂರು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಇದೇ ತಿಂಗಳ 30ರಂದು ನಾಲ್ಕನೇ ಗ್ಯಾರಂಟಿ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಮಯವಾಗಲಿದೆ. ಬಿಜೆಪಿಯಲ್ಲಿದ್ದರೇ ಸೋಲುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಅವರೆಲ್ಲ ಕಾಂಗ್ರೆಸ್ಗೆ ಬರಲು ಬಯಸಿದ್ದಾರೆ" ಎಂದು ಹೇಳಿದರು.