ಕೊಪ್ಪಳ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಈಗಾಗಲೇ ಸವದತ್ತಿ ಯಲ್ಲಮ್ಮ ಪ್ರಾಧಿಕಾರವನ್ನು ಘೋಷಣೆ ಮಾಡಿದ್ದೇವೆ. ಚಾಮುಂಡಿ ಬೆಟ್ಟ ಪ್ರಾಧಿಕಾರ ಮಾಡುತ್ತಿದ್ದೇವೆ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಹುಲಿಗೆಮ್ಮ ದೇವಿ ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಅಂಜನಾದ್ರಿ, ಹುಲಿಗೆಮ್ಮ ದೇವಸ್ಥಾನಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಪ್ರಾಧಿಕಾರ ರಚನೆ ಬಗ್ಗೆ ಚಿಂತನೆ ನಡೆಸಲಾಗುವುದು. ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲಾಗುವುದು. ಎಲ್ಲೆಲ್ಲಿ ಕೋಟ್ಯಂತರ, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಅಲ್ಲೆಲ್ಲ ಮೂಲ ಸೌಕರ್ಯ ಕಲ್ಪಿಸಲಾಗುವುದು. ಅಂಜನಾದ್ರಿ, ನಂಜನಗೂಡಿನ ನಂಜುಂಡೇಶ್ವರ, ಹುಲಿಗೆಮ್ಮ, ಮೈಲಾರ ಲಿಂಗೇಶ್ವರ ಸೇರಿ ಇತರ ಪ್ರಮುಖ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ಹುಲಿಗೆಮ್ಮ ದೇವಾಲಯದಲ್ಲಿ ಅನುದಾನ ಇದೆ. 30 ಎಕರೆ ಜಾಗ ಖರೀದಿಸಲಾಗಿದೆ. ಕೂಡಲೇ ಮಾಸ್ಟರ್ ಪ್ಲ್ಯಾನ್ ರಚಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಹಂತ ಹಂತವಾಗಿ ಸೌಲಭ್ಯ ಕಲ್ಪಿಸಲಾಗುವುದು. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ 15 ದಿನದಲ್ಲಿ ಅನುಮೋದನೆ ಕೊಡಿಸುವೆ. ಸಂಪೂರ್ಣ ಅಭಿವೃದ್ಧಿ ಆಗುವವರೆಗೆ ತಾತ್ಕಾಲಿಕವಾಗಿ ಸ್ನಾನಘಟ್ಟ, ಶೌಚಗೃಹಗಳನ್ನು ನಿರ್ಮಿಸಲಾಗುವುದು ಎಂದರು.