ಕುಷ್ಟಗಿ: ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅ. 22ಕ್ಕೆ ನಿಗದಿಯಾಗಿದೆ. ಈ ಗದ್ದುಗೆ ಗುದ್ದಾಟದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಿಬ್ಬರು ಸಂಪರ್ಕಕ್ಕೆ ಸಿಗದಿರುವುದರಿಂದ ಬಿಜೆಪಿ ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.
ಸಂಪರ್ಕಕ್ಕೆ ಸಿಗದ ಇಬ್ಬರು ಕೈ ಸದಸ್ಯರು: ಬಿಜೆಪಿಗೆ ಕುಷ್ಟಗಿ ಪುರಸಭೆ ಅಧಿಕಾರ? - Kushtagi Congress
ಕುಷ್ಟಗಿ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಆನೆ ಬಲ ಬಂದತಾಗಿದೆ. ಕಾಂಗ್ರೆಸ್ನ ಇಬ್ಬರು ಸದಸ್ಯರು ಸಂಪರ್ಕಕ್ಕೆ ಸಿಗದಿರುವುದು ಕೈ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಕುಷ್ಟಗಿ ಪುರಸಭೆಯ 23 ವಾರ್ಡ್ಗಳಿಗೆ ಕಾಂಗ್ರೆಸ್ 12, ಬಿಜೆಪಿ 8, 2 ಪಕ್ಷೇತರರು, ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 12 ಜನ ಸದಸ್ಯ ಬಲದಲ್ಲಿ ಮೂರನೇ ವಾರ್ಡ್ ಸದಸ್ಯೆ ಗೀತಾ ಶರಣಪ್ಪ ತುರಕಾಣಿ ನಾಟ್ ರಿಚೇಬಲ್ ಆಗಿದ್ದಾರೆ. 17ನೇ ವಾರ್ಡ್ ಸದಸ್ಯ ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದೇ ಬಿಂಬಿತರಾಗಿದ್ದ ವೀರೇಶಗೌಡ ಬೆದವಟ್ಟಿ ಸಂಪರ್ಕಕ್ಕೆ ಸಿಗದೆ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆ ಬಿಜೆಪಿ 8 ಜನ, ಮೂವರು ಪಕ್ಷೇತರರು ಸೇರಿದಂತೆ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿಯತ್ತ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿಕೊಂಡಿದೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಎರಡನೇ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿಗೆ ಕಾಂಗ್ರೆಸ್ನ ಇಬ್ಬರು ಸದಸ್ಯರು ಅಡ್ಡ ಮತದಾನ ಇಲ್ಲವೇ ತಟಸ್ಥರಾಗುವ ಸಾಧ್ಯತೆ ವರದಾನವಾಗಲಿದೆ.