ಕೊಪ್ಪಳ:ಜಿಲ್ಲೆಯಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಗೌಡರಿಬ್ಬರು ಅಖಾಡದಲ್ಲಿದ್ದು, ಮತದಾರ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅತಿ ಹೆಚ್ಚು ಮತದಾರರನ್ನು ಹೊಂದಿರದ ಸಮುದಾಯದ ನಾಯಕರೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಒಂದು ಬಾರಿ ಗೆದ್ದವರು ಮತ್ತೆ ನಿರಂತರ ಎರಡನೇ ಬಾರಿಗೆ ಆಯ್ಕೆಯಾಗದೇ ಇರುವುದು ಮತದಾರನ ಕರಾಮತ್ತಾಗಿದೆ.
ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರು:1952 ರ ಮೊದಲ ಚುನಾವಣೆಯಲ್ಲಿ ಲೋಕಸೇವಕ ಸಂಘದ ಅಂದಾನಪ್ಪ ಚಿನಿವಾಲರ್ ಅವರು ಆಯ್ಕೆಯಾಗಿದ್ದರು. 1957 ರಲ್ಲಿ ಕಾಂಗ್ರೆಸ್ನ ಪುಂಡಲೀಕಪ್ಪ ಜ್ಞಾನಮೋಠೆ, 1962 ರಲ್ಲಿ ಲೋಕಸೇವಕ ಸಂಘದ ಕಾಂತರಾವ್ ದೇಸಾಯಿ, 1967 ರಲ್ಲಿ ಕಾಂಗ್ರೆಸ್ನಿಂದ ಪುಂಡಲೀಕಪ್ಪ ಜ್ಞಾನಮೋಠೆ, 1972 ರಲ್ಲಿ ಕಾಂಗ್ರೆಸ್ನ ಕಾಂತರಾವ್ ದೇಸಾಯಿ, 1978 ರಲ್ಲಿ ಕಾಂಗ್ರೆಸ್ನ ಎಂ.ಗಂಗಣ್ಣ, 1983 ರಲ್ಲಿ ಕಾಂಗ್ರೆಸ್ನ ಹನುಮಗೌಡ ಪಾಟೀಲ್, 1985 ರಲ್ಲಿ ಜನತಾ ಪಕ್ಷದ ಎಂ.ಎಸ್. ಪಾಟೀಲ್, 1989 ರಲ್ಲಿ ಕಾಂಗ್ರೆಸ್ನ ಹನುಮಗೌಡ ಪಾಟೀಲ್ ಆಯ್ಕೆಯಾಗಿದ್ದರು.
1994 ರಲ್ಲಿ ಜನತಾದಳದ ಕೆ.ಶರಣಪ್ಪ, 1999 ರಲ್ಲಿ ಕಾಂಗ್ರೆಸ್ನ ಹಸನ್ಸಾಬ್ ದೋಟಿಹಾಳ, 2004 ರಲ್ಲಿ ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್, 2008ರಲ್ಲಿ ಕಾಂಗ್ರೆಸ್ನ ಅಮರೇಗೌಡ ಭಯ್ಯಾಪುರ, 2013 ರಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್, 2018 ರಲ್ಲಿ ಕಾಂಗ್ರೆಸ್ನ ಅಮರೇಗೌಡ ಪಾಟೀಲ್ ಭಯ್ಯಾಪುರ ಆಯ್ಕೆಯಾಗಿದ್ದಾರೆ. ಇದರಲ್ಲಿ ಹನುಮಗೌಡ ಹಾಗೂ ದೊಡ್ಡನಗೌಡ ಪಾಟೀಲ ತಂದೆ ಮಗನಾಗಿದ್ದಾರೆ. ಇಬ್ಬರೂ ಎರಡು ಬಾರಿ ಸೋಲು, ಎರಡು ಬಾರಿ ಗೆಲುವು ಸಾಧಿಸಿದ್ದಾರೆ.
ಪುಂಡಲೀಕಪ್ಪ ಜ್ಞಾನಮೋಠೆ, ಕಾಂತರಾವ್ ದೇಸಾಯಿ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಅದರಲ್ಲಿ ಪುಂಡಲೀಕಪ್ಪ ಅವರು 2 ಬಾರಿ ಸೋಲು ಅನುಭವಿಸಿದ್ದರೆ, ಕಾಂತಾರಾವ್ 1 ಬಾರಿ ಸೋತಿದ್ದಾರೆ. ಪುಂಡಲೀಕಪ್ಪ ಜ್ಞಾನಮೋಠೆ ಅತ್ಯಂತ ಕಡಿಮೆ ಸಂಖ್ಯೆಯ ವಾರಕಾರಿ ಸಮುದಾಯದವರಾಗಿದ್ದು, ಕಾಂತರಾಬ್ ದೇಸಾಯಿ ಬ್ರಾಹ್ಮಣ ಸಮುದಾಯದವರು. ಮುಸ್ಲಿಂ ಸಮುದಾಯದಿಂದ ಹಸನ್ಸಾಬ್ ದೋಟಿಹಾಳ 1 ಬಾರಿ ಆಯ್ಕೆಯಾಗಿದ್ದಾರೆ. ಉಳಿದಂತೆ ಕೆ ಶರಣಪ್ಪ, ಅಮರೇಗೌಡ, ಎಂ.ಎಸ್ ಪಾಟೀಲ, ಲಿಂಗಾಯತ ಜನಾಂಗಕ್ಕೆ ಸೇರಿದವರಾಗಿದ್ದಾರೆ.