ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಭಾಣಾಪುರ ಗ್ರಾಮದ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಕ್ಕಳಿಬ್ಬರು ಗಾಯಗೊಂಡು ತಾಯಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಅಮ್ಮನನ್ನು ಕಳೆದುಕೊಂಡಿರುವ ಕಂದಮ್ಮಗಳು ಅನಾಥರಾಗಿದ್ದಾರೆ.
ಕೊಪ್ಪಳದಲ್ಲಿನ ಸಂಬಂಧಿಗಳ ಮಗುವಿನ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ ತಮ್ಮ ಬಿನ್ನಾಳ ಗ್ರಾಮಕ್ಕೆ ಹಿಂತಿರುಗುವಾಗ ಭಾಣಾಪುರ ಬಳಿ ರಾತ್ರಿ ಅವರಿದ್ದ ಸ್ಕಾರ್ಪಿಯೋಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಐವರು ಮೃತಪಟ್ಟು, ನಾಲ್ಕು ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಪುಟ್ಟರಾಜ ಹಾಗೂ ಭೂಮಿಕಾ ಎಂಬ ಮಕ್ಕಳ ತಂದೆ ವರ್ಷದ ಹಿಂದೆಯೇ ಮೃತಪಟ್ಟಿದ್ದು, ತಾಯಿ ಪಾರವ್ವ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. ಇದೀಗ ಈ ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಕೊಪ್ಪಳ ರಸ್ತೆ ಅಪಘಾತ :ಅಗಲಿದ ತಾಯಿ, ಅನಾಥರಾದ ಮೂರು ಮಕ್ಕಳು ಪಾರವ್ವಳಿಗೆ ಒಟ್ಟು ಮೂರು ಜನ ಮಕ್ಕಳಿದ್ದು, ಮೂವರಲ್ಲಿ ಬಸವರಾಜ ಎಂಬಾತನನ್ನು ಮನೆಯಲ್ಲೇ ಬಿಟ್ಟು ಇನ್ನುಳಿದ ಇಬ್ಬರಾದ ಪುಟ್ಟರಾಜ ಮತ್ತು ಭೂಮಿಕಾಳನ್ನು ಕೊಪ್ಪಳಕ್ಕೆ ಸಂಬಂಧಿಕರ ಮನೆಗೆ ಕರೆತಂದಿದ್ದರು. ವಾಪಸಾಗುವಾಗ ಅಪಘಾತ ನಡೆದಿದ್ದು, ಪಾರವ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇವರ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಸ್ಥಿತಿಯನ್ನು ಕಂಡು ಸಂಬಂಧಿಕರು, ಮತ್ತು ಆ ಗ್ರಾಮದ ಜನರು ಮಮ್ಮಲ ಮರುಗುತ್ತಿದ್ದಾರೆ.
ಮೃತರ ಕುಟುಂಬಕ್ಕೆ ಪರಿಹಾರದ ಭರವಸೆ: ಸಚಿವ ಹಾಲಪ್ಪ ಆಚಾರ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರನ್ನು ವಿಚಾರಿಸಿದರು. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮೃತ ಕುಟುಂಬಕ್ಕೆ ಮತ್ತು ಅನಾಥರಾದ ಮಕ್ಕಳ ಭವಿಷ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದರು.
ಓದಿ :ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಸ್ಕಾರ್ಪಿಯೋದಲ್ಲಿದ್ದ ಐವರು ಸ್ಥಳದಲ್ಲೇ ಸಾವು