ಕರ್ನಾಟಕ

karnataka

ETV Bharat / state

ದೇಶ ಹಾಳು ಮಾಡಿದ್ದು ಯಾರೆಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಂಸದ ಸಂಗಣ್ಣ ಕರಡಿ

MP Sanganna Karadi: ಅಮೃತ್​ ಭಾರತ ಸ್ಟೇಷನ್ ಯೋಜನೆಯಡಿ ಕೊಪ್ಪಳ, ಮುನಿರಾಬಾದ್ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿ ಮಾತನಾಡಿದರು.

MP Sanganna Karadi spoke.
ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ ನೀಡಿ, ಸಂಸದ ಸಂಗಣ್ಣ ಕರಡಿ ಮಾತನಾಡಿದರು.

By

Published : Aug 6, 2023, 5:04 PM IST

ಕೊಪ್ಪಳ: "ಸಿದ್ದರಾಮಯ್ಯ ಒಬ್ಬ ಸೀನಿಯರ್‌ ಲೀಡರ್‌. ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರ ಮಾತನಾಡಬಾರದು. ಮೋದಿಯನ್ನು ಇಡೀ ಜಗತ್ತೇ ಮೆಚ್ಚಿದೆ. ಅದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ" ಎಂದು ಸಂಸದ ಸಂಗಣ್ಣ ಕರಡಿ ವಾಗ್ದಾಳಿ ನಡೆಸಿದರು.

"ನರೇಂದ್ರ ಮೋದಿ ದೇಶ ಹಾಳು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ದೇಶವನ್ನು ಯಾರು ಹಾಳು ಮಾಡಿದ್ದು ಅಂತ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜ್ಯದ ಅಭಿವೃದ್ಧಿ ಬಗ್ಗೆ ಏನೂ ಕೇಳಬೇಡಿ ಅನ್ನುತ್ತಿದ್ದಾರೆ ಸಿದ್ದರಾಮಯ್ಯ. ಅವರಲ್ಲಿ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಇಂತವರೆಲ್ಲ ಸೇರಿ ಮೋದಿ ವಿರುದ್ಧ ಒಕ್ಕೂಟ ಮಾಡಿಕೊಂಡಿದ್ದಾರೆ. ನಾಳೆ ಅವರಲ್ಲಿ ಯಾರ್ಯಾರು ಏನು ಕಿತ್ಕೊಂಡ್‌ ಹೋಗ್ತಾರೋ ಗೊತ್ತಿಲ್ಲ. ಭಾರತ ಈಗ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದೆ. ಕಾಂಗ್ರೆಸ್​​ನವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಕೃಷಿ ಸಮ್ಮಾನ್ ಯೋಜನೆಯನ್ನು ಈ ಸರಕಾರ ಕಿತ್ತುಕೊಳ್ಳುತ್ತಿದೆ. ರೈತರನ್ನು ಕಡೆಗಣಿಸಿ ದಿಕ್ಕು ತಪ್ಪಿಸುತ್ತಿದೆ" ಎಂದು ಹರಿಹಾಯ್ದರು.

ದೇಶದ 508 ರೈಲು ನಿಲ್ದಾಣಗಳು ಮೇಲ್ದರ್ಜೆಗೆ: "ಯಾವ ರಾಷ್ಟ್ರ ರೈಲ್ವೆ, ವಾಯು ವಲಯ, ರಾಷ್ಟೀಯ ಹೆದ್ದಾರಿಗಳು ಹಾಗೂ ಜಲ ಮಾರ್ಗಗಳನ್ನು ಹೆಚ್ಚಿಸುತ್ತದೋ ಆ ದೇಶ ಜಗತ್ತಿನ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಬರುತ್ತದೆ. ಈ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ 508 ರೈಲು ನಿಲ್ದಾಣಗಳನ್ನು ಅಮೃತ್​ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆ ಮಾಡಿ ರೈಲು ನಿಲ್ದಾಣಗಳಲ್ಲಿ ಆಸನಗಳು, ಲಿಫ್ಟ್ ವ್ಯವಸ್ಥೆ, ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯಗಳ ಜೊತೆಗೆ, ಆಕರ್ಷಕ ವಾಸ್ತುಶಿಲ್ಪ ಹಾಗು ಪ್ರಯಾಣಿಕಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ" ಎಂದು ಅವರು ಹೇಳಿದರು.

ಗಂಗಾವತಿ ರೈಲು ನಿಲ್ದಾಣ ಅಭಿವೃದ್ಧಿಗೆ ಮನವಿ: "ಅಮೃತ್​ ಭಾರತ ಯೋಜನೆಯಡಿ ಜಿಲ್ಲೆಯ ಎರಡು ರೈಲು ನಿಲ್ದಾಣಗಳು ಆಯ್ಕೆಯಾಗಿವೆ. ಕೊಪ್ಪಳ ರೈಲು ನಿಲ್ದಾಣವನ್ನು 21 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಮತ್ತು ಮುನಿರಾಬಾದ್ ರೈಲು ನಿಲ್ದಾಣವನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಹನುಮನ ಜನ್ಮಭೂಮಿ ಅಂಜನಾದ್ರಿಗೆ ಸುಲಭ ಸಂಪರ್ಕ ಕಲ್ಪಿಸಲು ಗಂಗಾವತಿ ರೈಲು ನಿಲ್ದಾಣದ ಅಭಿವೃದ್ಧಿಗಾಗಿ ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಆನೆಗುಂದಿಯಲ್ಲಿ ರೋಪ್‌ವೇ ನಿರ್ಮಾಣಕ್ಕೂ ಕ್ರಮ ವಹಿಸಲಾಗುತ್ತಿದೆ" ಎಂದು ಸಂಸದರು ಭರವಸೆ ನೀಡಿದರು.

"ಬಾಣಾಪುರ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಶೀಘ್ರದಲ್ಲಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು. ಹುಲಿಗಿ ಸೇತುವೆ ನಿರ್ಮಾಣಕ್ಕೆ ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಕಿನ್ನಾಳ ರಸ್ತೆಯಲ್ಲಿ ಕೆಳಸೇತುವೆ, ಭಾಗ್ಯನಗರ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ, ಕುಷ್ಟಗಿಗೆ ರೈಲು, ಮಳೆ ಮಾಪನಾ ಕೇಂದ್ರ ಮಂಜೂರು, ಪಾಸ್‌ಪೋರ್ಟ್ ಕಚೇರಿ ಆರಂಭ ಹೀಗೆ ನಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ."

"ಸೆಪ್ಟೆಂಬರ್ ತಿಂಗಳಲ್ಲಿ ಸಿಂಧನೂರಿಗೆ ರೈಲು ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ಎರಡು ರೈಲು ನಿಲ್ದಾಣಗಳ ಅವಶ್ಯಕತೆಯಿದೆ. ಈಗಾಗಲೇ ಬಸ್ಸಾಪುರ ಹತ್ತಿರ ಜಮೀನು ವೀಕ್ಷಣೆ ಮಾಡಲಾಗಿದೆ. ಕೊಪ್ಪಳದ ರೈಲು ನಿಲ್ದಾಣಕ್ಕೆ ಇನ್ನೊಂದು ದಿಕ್ಕಿನಲ್ಲಿ ಪ್ರವೇಶ ಮಾರ್ಗವನ್ನು ಸ್ಥಾಪಿಸುವ ಕುರಿತಂತೆ ಹಲವು ಮುಖಂಡರು ಮನವಿ ಸಲ್ಲಿಸಿದ್ದು, ಭಾಗ್ಯನಗರ ರಸ್ತೆ ಭಾಗದಲ್ಲಿ ಕೊಪ್ಪಳ ರೈಲು ನಿಲ್ದಾಣದ 2ನೇ ಪ್ರವೇಶಮಾರ್ಗ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ".

"ಕೊಪ್ಪಳದಲ್ಲಿ ಏರ್ಪೋರ್ಟ್ ನಿರ್ಮಾಣ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯ ಸರ್ಕಾರದ ಪಾಲನ್ನು ಮುಂದುವರಿಸಬೇಕೆಂದು ಕೂಡಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ" ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಇದನ್ನೂಓದಿ:Prahlad Joshi: ಮೋದಿ ಸರ್ಕಾರ ಬಂದ ನಂತರ ಹಂತಹಂತವಾಗಿ ರೈಲ್ವೇ ಅಭಿವೃದ್ಧಿ ಕಾಮಗಾರಿ ಆರಂಭ- ಪ್ರಹ್ಲಾದ್​ ಜೋಶಿ

ABOUT THE AUTHOR

...view details